ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನಲೆ-ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ

ಬೆಳಗಾವಿ,ಆ.3- ಮಹಾರಾಷ್ಟ್ರದಲ್ಲಿ ಕುಂಭದ್ರೋಣ ಮಳೆ ಮುಂದುವರಿದಿದ್ದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ರಾಯಚೂರಿನಲ್ಲಿ ಪ್ರವಾಹ ಪರಿಸ್ಥಿತಿ ತಲೆದೂರಿದೆ.

ನದಿ ಪಾತ್ರದ ಗ್ರಾಮಗಳು, ಜಮೀನುಗಳು ಜಲಾವೃತಗೊಂಡು. ಸೇತುವೆಗಳು ಸಹ ಮುಳುಗಡೆಯಾಗಿವೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಬೆಳಗಾವಿಯ ಪೀರನವಾಡಿ, ಲಕ್ಷ್ಮಿಗಲ್ಲಿ, ಉದ್ಯಮ್ ಬಾಗ್‍ನ ಸುಮಾರು 50 ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಳಗಾವಿಯ ಮಾಂಜ್ರಾ, ಹರಿತಕ್ರಾಂತಿಯ 50ಕ್ಕೂ ಹೆಚ್ಚು ಕುಟುಂಬಗಳು ನೀರಿನಲ್ಲಿ ಸಿಲುಕಿದ್ದು ಎನ್‍ಡಿಆರ್‍ಎಫ್ ಪಡೆ ಬೋಟ್‍ಗಳ ಮೂಲಕ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.ಸಂತ್ರಸ್ಥರಿಗೆ ಗಂಜಿ ಕೇಂದ್ರ ತೆರೆಯಲಾಗಿದೆ.

ಭಾರೀ ಪ್ರಮಾಣದ ನೀರು ಹರಿಯುತ್ತಿರುವ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.

ಅಲ್ಲದೆ ಕಳೆದ ಐದು ದಿನಗಳಿಂದ ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನರು ಪರದಾಡುತ್ತಿದ್ದಾರೆ.

ರಸ್ತೆಯಲ್ಲೆಲ್ಲ ನೀರು ಹರಿದು ತಗ್ಗಿನ ಪ್ರದೇಶಗಳಿರುವ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿ ಆತಂಕದಲ್ಲಿ ಕಳೆಯಬೇಕಾಗಿದೆ. ಬೆಳಗಾವಿ ನಗರದ ಹಲವೆಡೆ ಜನರನ್ನು ಬೇರೆಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದಡಗುಂಟಿ ತಿಳಿಸಿದ್ದಾರೆ.

ಮುಳುಗಡೆ ಭೀತಿಯಲ್ಲಿ ಗ್ರಾಮಗಳು: ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿ ಬಿಡಲಾಗುತ್ತಿದ್ದು ಜಿಲ್ಲೆಯ ನದಿ ಸುತ್ತಮುತ್ತನಲ್ಲಿರುವ ಹಾಗೂ ಅಪಾಯ ಅಂಚಿನಲ್ಲಿರುವ ಗ್ರಾಮಸ್ಥರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಎಲ್ಲ ಉಪವಿಭಾಗ ಅಧಿಕಾರಿಗಳು ಹಾಗೂ ತಹಶಿಲ್ದಾರರಿಗೆ ಸೂಚನೆ ನೀಡಿದ್ದಾರೆ.

ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ: ಜಿಲ್ಲೆಯ ಎಲ್ಲಾ ತಾಲೂಕು, ಉಪವಿಭಾಗ ಮಟ್ಟದಲ್ಲಿ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ನಿಯಂತ್ರಣ ಕೊಠಡಿಗಳನ್ನು ತೆರೆದು ಅಗತ್ಯವಾದ ಸಿಬ್ಬಂದಿಗಳನ್ನು ನಿಯೋಜಿಸಲು ಸೂಚಿಸಲಾಗಿದೆ.

ನದಿ ಪಾತ್ರದ ಗ್ರಾಮಗಳ ಜನರನ್ನು ಬೇರೆ ಕಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದು, ಪೊಲೀಸ್ ಇಲಾಖೆಯವರು, ಅಗ್ನಿಶಾಮಕ ಸಿಬ್ಬಂದಿಗಳು ರಾಜ್ಯ ವಿಪತ್ತು ನಿರ್ವಹಣಾ ಪಡೆ, ಜಿಲ್ಲಾ ಗೃಹರಕ್ಷಕ ದಳದ ಬೆಳಗಾವಿ, ಪಂಚಾಯತ್ ರಾಜ್ಯ ಇಂಜಿನಿಯರಿಂಗ್ ಹಾಗೂ ಲೋಕೊಪಯೋಗಿ ಇಲಾಖೆಯ ಅಭಿಯಂತರರು ಪ್ರವಾಹದ ಸಂದರ್ಭದಲ್ಲಿ ಜನರ ರಕ್ಷಣೆಗೆ ಬೇಕಾಗುವ ಅಗತ್ಯ ಬೋಟ್‍ಗಳು ಸೇರಿದಂತೆ ಇನ್ನಿತರ ರಕ್ಷಣಾ ಸಾಮಗ್ರಿಗಳನ್ನು ಒಳಗೊಂಡ ಪಡೆ ಸನ್ನದ್ಧವಾಗಿದೆ.

ಅದೇ ರೀತಿಯಾಗಿ ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಗತ್ಯವಾದ ನುರಿತ ವೈದ್ಯರು, ಸಿಬ್ಬಂದಿ ಹಾಗೂ ಔಷಧಿಗಳೊಂದಿಗೆ ಪ್ರವಾಹ ಪೀಡಿತ ಸ್ಥಳಗಳಲ್ಲಿ ಸೇವೆಗೆ ಮುಂದಾಗಿದ್ದಾರೆ.

ಒಂದು ವೇಳೆ ಅಧಿಕಾರಿಗಳು ಈ ವಿಷಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸಿದಲ್ಲಿ ಅಂತಹವರ ಮೇಲೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರವಾಹ ಭೀತಿ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದ ಮತ್ತು ಮಹಾರಾಷ್ಟ್ರದ ಜಲಾಶಯಗಳಿಂದ ದಿಢೀರ್ ನೀರು ಬಿಟ್ಟರೆ ಕೃಷ್ಣಾ ಸೇರಿದಂತೆ ವಿವಿಧ ನದಿ ಪಾತ್ರದಲ್ಲಿರುವ ಚಿಕ್ಕೋಡಿ ಉಪ ವಿಭಾಗದ 37 ಗ್ರಾಮಗಳು ಪ್ರವಾಹದಿಂದ ತೀವ್ರವಾಗಿ ಬಾಧಿತಗೊಳ್ಳಲಿವೆ. ಅದೇ ರೀತಿ 39 ಗ್ರಾಮಗಳು ಪ್ರವಾಹದಿಂದ ಭಾಗಶಃ ಬಾಧಿತಗೊಳ್ಳುವ ಸಾಧ್ಯತೆಯಿದೆ ಎಂದು ಚಿಕ್ಕೋಡಿ ಉಪ ವಿಭಾಗಾಧಿಕಾರಿ ರವಿ ಕರಲಿಂಗಣ್ಣವರ ತಿಳಿಸಿದ್ದಾರೆ.

ಚಿಕ್ಕೊಡಿ ಉಪ ವಿಭಾಗದ ಚಿಕ್ಕೋಡಿ, ರಾಯಭಾಗ ಹಾಗೂ ಅಥಣಿ ತಾಲ್ಲೂಕಿನಲ್ಲಿ ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಪಂಚಗಂಗಾ ನದಿ ತೀರದಲ್ಲಿರುವ ಒಟ್ಟು 37 ಗ್ರಾಮಗಳು ಪ್ರವಾಹದಿಂದ ತೀವ್ರವಾಗಿ ಬಾಧಿತಗೊಳ್ಳಲಿದ್ದು, ಅದೇ ರೀತಿ ಒಟ್ಟಾರೆ 39 ಗ್ರಾಮಗಳು ಭಾಗಶಃ ಬಾಧಿತಗೊಳ್ಳಲಿವೆ.

ಚಿಕ್ಕೋಡಿ ತಾಲ್ಲೂಕು- ಕಲ್ಲೋಳ, ಯಡೂರ, ಇಂಗಳಿ, ಚಂದೂರ, ಮಾಂಜರಿ, ಬಾರವಾಡ ಹಾಗೂ ಹುನ್ನರಗಿ. ರಾಯಭಾಗ ತಾಲ್ಲೂಕು-ಹಳೇ ದಿಗ್ಗೆವಾಡಿ, ಗುಂಡವಾಡ, ಶಿರಗೂರ, ಖೇಮಲಾಪುರ, ಸಿದ್ದಾಪುರ ಅಥಣಿ ತಾಲ್ಲೂಕು-ಮೊಳವಾಡ, ಕುಸನಾಳ, ಕೃಷ್ಣಾ ಕಿತ್ತೂರ, ಬಣಜವಾಡ, ತೀರ್ಥ, ನದಿಇಂಗಳಗಾಂವ, ದರೂರ, ಕವಟಕೊಪ್ಪ, ಶೇಗುಣಶಿ, ಹುಲಬಾಳಿ, ಅವರಖೋಡ, ನಾಗನೂರ ಪಿ.ಕೆ., ಸತ್ತಿ, ಮಹಿಷವಾಡಗಿ, ಜನವಾಡ, ಸವದಿ ದರ್ಗಾ, ಶಿರಹಟ್ಟಿ, ಕಾತ್ರಾಳ, ಝುಂಜರವಾಡ, ನಂದೇಶ್ವರ, ಸಪ್ತಸಾಗರ, ಮಂಗಾವತಿ, ಜುಗೂಳ, ಶಹಾಪುರ ಗ್ರಾಮಗಳಿಗೆ ತುರ್ತು ಸಂದರ್ಭದಲ್ಲಿ ನದಿ ತೀರದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಹಾಗೂ ಪರಿಹಾರ (ಗಂಜಿ) ಕೇಂದ್ರಗಳನ್ನು ಸ್ಥಾಪಿಸಲು ಸೂಕ್ತ ಸ್ಥಳಗಳನ್ನು ಮುಂಚಿತವಾಗಿಯೇ ಗುರುತಿಸಲಾಗಿದೆ.

ನದಿ ತೀರದ ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮವಾಗಿ ಸಾಧ್ಯವಾದಷ್ಟು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು.ಮುಳುಗಡೆಗೊಂಡಿರುವ ಸೇತುವೆಗಳನ್ನು ದಾಟುವ ಸಾಹಸಕ್ಕೆ ಮುಂದಾಗಬಾರದು.ತುರ್ತು ಸಂದರ್ಭದಲ್ಲಿ ತಕ್ಷಣವೇ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಉಪ ವಿಭಾಗಾಧಿಕಾರಿ ರವಿ ಕರಲಿಂಗಣ್ಣವರ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ