ಪ್ರಿಯಾಂಕಾ ವಾದ್ರಾ ಅಥವಾ ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗುವ ಸಾಧ್ಯತೆ

ನವದೆಹಲಿ, ಆ.1- ನಾವಿಕನಿಲ್ಲದ ಹಡಗಿನಂತಾಗಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಇಂದು ಸಂಜೆಯೊಳಗೆ ಹೊಸ ಅಧ್ಯಕ್ಷರ ನೇಮಕವಾಗುವುದು ಬಹುತೇಕ ಖಚಿತವಾಗಿದೆ.

ಎಐಸಿಸಿ ಅಧ್ಯಕ್ಷರಾಗಿ ಪಕ್ಷ ಮುನ್ನಡೆಸಿದ್ದ ರಾಹುಲ್‍ಗಾಂಧಿ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಯಾರೂ ನೇಮಕವಾಗಿರಲಿಲ್ಲ. ನೆಹರು ವಂಶದ ಕುಡಿ ಪ್ರಿಯಾಂಕಾ ವಾದ್ರಾ ಅಥವಾ ಕಾಂಗ್ರೆಸ್‍ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಅಹಮ್ಮದ್ ಪಟೇಲ್, ಮುಕುಲ್ ವಾಸ್ಮಿಕ್, ಹರೀಶ್ ರಾವಂತ್, ಕೆ.ಸಿ.ವೇಣುಗೋಪಾಲ್, ಮೋತಿಲಾಲ್ ಓರಾ, ಪ್ರಿಯಾಂಕಾ ವಾದ್ರಾ ಮುಂತಾದವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಎಐಸಿಸಿ ಅಧ್ಯಕ್ಷರ ಆಯ್ಕೆಯಾಗುವ ಸಂಭವವಿದೆ ಎಂದು ತಿಳಿದುಬಂದಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಅದಕ್ಕೂ ಮುಂಚೆ ನಡೆದ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್‍ಗಾಂಧಿ ಅವರು ಸತತವಾಗಿ ವೈಫಲ್ಯ ಕಂಡಿದ್ದರು. ಇದರಿಂದ ಬೇಸತ್ತ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಲ್ಲದೆ ತಮ್ಮ ಕುಟುಂಬದವರಾರೂ ಈ ಸ್ಥಾನಕ್ಕೆ ಬರಬಾರದು ಎಂದು ತಿಳಿಸಿದ್ದರಾದರೂ ಎಐಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಇತರೆ ಯಾರೂ ಮುಂದೆ ಬಂದಿರಲಿಲ್ಲ.

ಪ್ರಸ್ತುತ ದೇಶದಲ್ಲಿ ಕಾಂಗ್ರೆಸ್ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ. ಲೋಕಸಭೆಯಲ್ಲೂ ಪ್ರತಿಪಕ್ಷದ ಸ್ಥಾನ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಪಕ್ಷವನ್ನು ಮುನ್ನಡೆಸುವ ಛಾತಿ ಇರುವವರ ಅಗತ್ಯ ಮತ್ತು ಅನಿವಾರ್ಯತೆ ಹೆಚ್ಚಾಗಿದೆ.

ಹೀಗಾಗಿ ಪ್ರಿಯಾಂಕಾ ವಾದ್ರಾ ಅವರೇ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದುಬಂದಿದ್ದು, ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಿಯಾಂಕಾ ವಾದ್ರಾ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಅಲ್ಲದೆ, ಉತ್ತರ ಪ್ರದೇಶದ ಚುನಾವಣೆಯ ಉತ್ತರ ಭಾಗದ ಉಸ್ತುವಾರಿ ವಹಿಸಿಕೊಂಡಿದ್ದರು.

ಅಲ್ಲದೆ, ಇತ್ತೀಚೆಗೆ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ನಡೆದ ಗಲಭೆಯಲ್ಲಿ 18 ಜನ ಮೃತಪಟ್ಟ ಘಟನೆ ಸಂಬಂಧ ಆ ಸ್ಥಳಕ್ಕೆ ಹೋಗಿ ಹಠ ಹಿಡಿದು ಪ್ರತಿಭಟನೆ ನಡೆಸಿದ್ದರು.

ಬಹುತೇಕ ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾ ವಾದ್ರಾ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಅಭಿಲಾಷೆ ಹೊಂದಿದ್ದಾರೆ. ಆದರೆ, ರಾಹುಲ್ ಅವರು ಮಾತ್ರ ತಮ್ಮ ಕುಟುಂಬದವರು ಯಾರೂ ಆಗಬಾರದೆಂಬ ತೀರ್ಮಾನಕ್ಕೆ ಬಂದಿದ್ದಾರೆ.

ಸೋನಿಯಾಗಾಂಧಿ ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ, ಇಂದಿನ ಸಭೆಯಲ್ಲಿ ಪ್ರಿಯಾಂಕಾ ವಾದ್ರಾ ಅವರು ಆಗದಿದ್ದರೆ ಕಾಂಗ್ರೆಸ್‍ನ ಅತ್ಯಂತ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಹುದ್ದೆ ಒಲಿದುಬರುವ ಸಾಧ್ಯತೆ ಇದೆ.

ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಐದು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೇವಕರು. ಪಕ್ಷದ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದವರು.

ಕೇಂದ್ರ ಸಚಿವರಾಗಿ, ಸಂಸದೀಯ ಪಕ್ಷದ ನಾಯಕರಾಗಿ ಸಮರ್ಥವಾಗಿ ಕಾರ್ಯ ನಿಭಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮಹೋನ್ನತ ಹುದ್ದೆ ಇವರಿಗೆ ಒಲಿದು ಬಂದರೂ ಆಶ್ಚರ್ಯವಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ