ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಕಾಂಗ್ರೆಸ್-17 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲು ನಿರ್ಧಾರ

ಬೆಂಗಳೂರು,ಆ.2- ಅತ್ತ ಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟ್‍ನಲ್ಲಿ ಸ್ಪೀಕರ್ ಕ್ರಮ ಪ್ರಶ್ನಿಸಿ ಕಾನೂನು ಹೋರಾಟ ನಡೆಸುತ್ತಿದ್ದರೆ ಇತ್ತ 17 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಭಾರೀ ಸಿದ್ಧತೆ ನಡೆಸುತ್ತಿದೆ.

ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 17 ಅನರ್ಹ ಶಾಸಕರ ಕ್ಷೇತ್ರಗಳಿಗೆ ಎದುರಾಗಲಿರುವ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಕಾಂಗ್ರೆಸ್, ಎಲ್ಲಾ ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಸ್ರ್ಪಸಲು ನಿರ್ಧರಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ 17 ಕ್ಷೇತ್ರಗಳ ಅಭ್ಯರ್ಥಿಗಳ ಹುಡುಕಾಟಕ್ಕೆ ವೀಕ್ಷಕರನ್ನು ನೇಮಿಸಲು ನಿರ್ಧರಿಸಲಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದು ಇದಕ್ಕಾಗಿ ಹಿರಿಯ ಮುಖಂಡರ ನೇತೃತ್ವದಲ್ಲಿ ವೀಕ್ಷಕರ ತಂಡ ರಚನೆಯಾಗಲಿದೆ.

ಜೆಡಿಎಸ್ ಹಾಲಿ ಇರುವ ಮೂರು ಕ್ಷೇತ್ರ ಬಿಟ್ಟು ಕೊಡುವ ಬಗ್ಗೆ ಕೆಲ ನಾಯಕರು ಪ್ರಸ್ತಾಪ ತಿರಸ್ಕರಿಸಿದ್ದು, ಅದು ನೇರವಾಗಿ ಬಿಜೆಪಿಗೆ ಅನುಕೂಲವಾಗುತ್ತದೆ.ಹೀಗಾಗಿ ಯಾವುದೇ ಕಾರಣಕ್ಕೂ ಮೈತ್ರಿ ಬೇಡ ಎಂದು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ರಮೇಶ್‍ಕುಮಾರ್ ತಿಳಿಸಿದ್ದಾರೆ.ಹೀಗಾಗಿ ಪ್ರತ್ಯೇಕವಾಗಿ 17 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಲಾಗಿದೆ.

17 ಕ್ಷೇತ್ರಗಳಲ್ಲಿ ಗೆಲುವು ಸಾಸಲು ಸೂಕ್ತ ಅಭ್ಯರ್ಥಿಯ ಹುಡುಕಾಟ, ಪಕ್ಷ ಸಂಘಟನೆ ಹಾಗೂ ಉಸ್ತುವಾರಿಗಳನ್ನು ನೇಮಕ ಮಾಡಲು ಸಭೆ ತೀರ್ಮಾನಿಸಿದೆ.

ಸಭೆಯಲ್ಲಿ ಪಕ್ಷ ಸಂಘಟನೆ, ಸ್ರ್ಪಸುವ ಆಕಾಂಕ್ಷಿಗಳಲ್ಲಿ ಪ್ರಬಲರು ಯಾರು? ಅನರ್ಹ ಶಾಸಕರ ಮುಂದಿನ ನಡೆಯೇನು?ಸುಪ್ರೀಂಕೋರ್ಟ್‍ನಲ್ಲಿ ಸ್ಪೀಕರ್ ವಿರುದ್ಧ ಸಲ್ಲಿಸಿರುವ ಅರ್ಜಿ ವಿಚಾರ, ಪ್ರಸಕ್ತ ರಾಜಕೀಯ ವಿಚಾರಗಳ ಕುರಿತು ಸಮಾಲೋಚನೆ ನಡೆಸಲಾಯಿತು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಪ್ರಸಕ್ತ ರಾಜಕೀಯ ವಿದ್ಯಮಾನ, ಪಕ್ಷದ ಮುಂದಿನ ಹಾದಿ, ಅನರ್ಹರ ಬಗ್ಗೆ ಕಾನೂನಿನ ಹೋರಾಟದ ಸಮಾಲೋಚನೆ ನಡೆಸಲಾಗಿದೆ. ಪಕ್ಷಕ್ಕೆ ದ್ರೋಹ ಬಗೆದಿರುವವರಿಗೆ ತಕ್ಕ ಪಾಠ ಕಲಿಸಬೇಕು. ನಂಬಿಕೆ ದ್ರೋಹಿಗಳು ಸುಪ್ರೀಂಕೋರ್ಟ್ ಮೂಲಕ ರಕ್ಷಣೆ ಪಡೆಯಲು ಮುಂದಾಗಿದ್ದಾರೆ. ಬೆನ್ನಿಗೆ ಚೂರಿ ಹಾಕಿರುವ 17 ಅನರ್ಹರಿಗೆ ತಕ್ಕ ಪಾಠ ಕಲಿಸಲು ಸರಿಯಾದ ನಿರ್ಣಯ ಯಾವುದು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿಸಿದರು.

ಎಲ್ಲಾ 17 ಕ್ಷೇತ್ರಗಳಲ್ಲಿ ಸ್ರ್ಪಸಲು ಸಿದ್ಧತೆ ಮಾಡಿಕೊಳ್ಳುತ್ತೇವೆ. ಬಿಜೆಪಿ ಸೋಲಿಸುವುದೇ ನಮ್ಮ ಗುರಿ ಎಂದರು.

ಉದ್ಯಮಿಗಳಿಗೂ ದೇಶದಲ್ಲಿ ರಕ್ಷಣೆ ಇಲ್ಲದಂತಾಗಿದೆ. ಸಾಕಷ್ಟು ಕಂಪನಿಗಳು, ಉದ್ಯಮಿಗಳು ಸ್ಥಗಿತಗೊಳ್ಳುವ ಹಂತಕ್ಕೆ ಬಂದು ನಿಂತಿವೆ ಎಂದು ಆರೋಪಿಸಿದರು.

ಪರೇಶ್ ಮೆಸ್ತಾ ಹಾಗೂ ಟಿಪ್ಪು ಜಯಂತಿ ಆಚರಣೆ ವೇಳೆ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆಯಲು ಮಾಡಿದ ತೀರ್ಮಾನ ಸರಿಯಲ್ಲ. ಪ್ರಕರಣದಲ್ಲಿ ಮುಗ್ಧರ ವಿರುದ್ಧ ಕೇಸು ದಾಖಲಾಗಿದ್ದರೆ ವಾಪಸ್ ಪಡೆಯಲಿ. ಎಲ್ಲರ ಮೇಲಿನ ಕೇಸ್ ವಾಪಸ್ ಪಡೆಯುವುದು ಸರಿಯಲ್ಲ ಎಂದರು.

ಆಪರೇಷನ್ ಕಮಲ ಇನ್ನೂ ನಿಂತಿಲ್ಲ. ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ ಆಮೀಷ ಒಡ್ಡುವುದನ್ನು ಮುಂದುವರೆಸಿದ್ದಾರೆ.ಆದರೆ ಬಿಜೆಪಿಯಂತೆ ಕಾಂಗ್ರೆಸ್ ಮಾಡುವುದಿಲ್ಲ ಎಂದರು.

ಲಿಂಗಾಯತ ಸಮುದಾಯದ ಮುಖಂಡರು ಇತ್ತೀಚೆಗೆ ಯಡಿಯೂರಪ್ಪನವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ಬೇಡಿಕೆಯಿಟ್ಟಾಗ ರಾಜೀನಾಮೆ ನೀಡಿರುವ 15 ಶಾಸಕರಿಗೆ ವಿಷ ಕೊಡಬೇಕೆ ಎಂದು ಪ್ರಶ್ನಿಸಿರುವುದು ಶಾಸಕರ ಕುದುರೆ ವ್ಯಾಪಾರ ಮಾಡಿರುವ ಬಗ್ಗೆ ಅವರ ಮಾತುಗಳಲ್ಲೇ ಸ್ಪಷ್ಟವಾಗಿದೆ ಎಂದರು.

ಉಪ ಚುನಾವಣೆ 17 ಕ್ಷೇತ್ರಗಳಲ್ಲೂ ನಿಶ್ಚಿತ. ಹಿರಿಯ ನಾಯಕರಿಗೆ ಜವಾಬ್ದಾರಿ ಕೊಟ್ಟಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಹಿರಿಯ ನಾಯಕರ ನೇತೃತ್ವದಲ್ಲಿ ಸಮಿತಿ ರಚನೆಯಾಗಲಿದೆ. ಪಕ್ಷಕ್ಕೆ ಬದ್ಧರಾಗಿರುವವರಿಗೆ ಟಿಕೆಟ್ ನೀಡಲು ನಿರ್ಧಾರ ಮಾಡಿದ್ದೇವೆ ಎಂದರು.

ಸಭೆಯಲ್ಲಿ ಸಿದ್ದರಾಮಯ್ಯ, ಈಶ್ವರ್ ಖಂಡ್ರೆ, ರಮೇಶ್ ಕುಮಾರ್, ಡಿ.ಕೆ.ಶಿವಕುಮಾರ್, ಅಬ್ದುಲ್ ಖಾದರ್, ಶಿವಾನಂದ ಪಾಟೀಲ್, ಎಚ್.ಸಿ.ಮಹದೇವಪ್ಪ, ಆರ್.ವಿ.ದೇಶಪಾಂಡೆ, ಕೃಷ್ಣಬೈರೇಗೌಡ, ತುಕಾರಾಂ, ಚೆಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ಕೆ.ಎಚ್.ಮುನಿಯಪ್ಪ, ವೀರಪ್ಪಮೊಯ್ಲಿ ಮುಂತಾದವರು ಇದ್ದರು.

ಕಾಂಗ್ರೆಸ್ ಉಸ್ತುವಾರಿಗಳ ನೇಮಕ:
ಚಿಕ್ಕಬಳ್ಳಾಪುರ- ರಮೇಶ್‍ಕುಮಾರ್
ಯಲ್ಲಾಪುರ- ಆರ್.ವಿ.ದೇಶಪಾಂಡೆ
ಕಾಗವಾಡ-ಸತೀಶ್ ಜಾರಕಿಹೊಳಿ/ಪ್ರಕಾಶ್ ಹುಕ್ಕೇರಿ
ಅಥಣಿ- ಈಶ್ವರ್ ಖಂಡ್ರೆ
ಕೆ.ಆರ್.ಪುರ – ಕೆ.ಜೆ.ಜಾರ್ಜ್
ಹೊಸಕೋಟೆ- ಕೃಷ್ಣಬೈರೇಗೌಡ
ಆರ್.ಆರ್.ನಗರ-ಡಿ.ಕೆ.ಸುರೇಶ್
ಮಹಾಲಕ್ಷ್ಮೀ ಲೇಔಟ್- ಮಾಗಡಿ ಬಾಲಕೃಷ್ಣ /ನಜೀರ್ ಅಹಮದ್
ಯಶವಂತಪುರ- ಜಮೀರ್ ಅಹಮದ್
ಶಿವಾಜಿನಗರ- ಜಮೀರ್ ಅಹ್ಮದ್/ರಿಜ್ವಾನ್/ ಇಬ್ರಾಹೀಂ/ರೆಹಮಾನ್ ಖಾನ್
ಕೆ.ಆರ್.ಪೇಟೆ- ಚೆಲುವರಾಯ ಸ್ವಾಮಿ
ಹಿರೇಕೆರೂರು- ಎಚ್.ಕೆ.ಪಾಟೀಲ್
ಹೊಸಪೇಟೆ- ಉಗ್ರಪ್ಪ
ರಾಣೇಬೆನ್ನೂರು- ಎಚ್.ಕೆ.ಪಾಟೀಲ್/ವಿನಯ್ ಕುಲಕರ್ಣಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ