
ವಡೋದರ,ಆ.1– ದಾಖಲೆ ಪ್ರಮಾಣದ ಭಾರೀ ಮಳೆಯಿಂದಾಗಿ ಗುಜರಾತ್‍ನಲ್ಲಿ ವಡೋದರದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ನಿನ್ನೆ ಸುರಿದ ಮಳೆಗೆ ವಿಮಾನ ನಿಲ್ದಾಣ ಜಲಾವೃತ್ತಗೊಂಡಿದ್ದು, ಎರಡು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದ್ದು, ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಏರ್‍ಪೆಪೊರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್ ವಡೋದರದಲ್ಲಿ ನಿನ್ನೆ 12 ಗಂಟೆಗಳಲ್ಲಿ 400 ಮಿ.ಮೀನಷ್ಟು ಮಳೆಯಾಗಿದೆ. ಅಧಿಕ ಮಳೆ ಸುರಿದು ಹಲವೆಡೆ ಜಲಾವೃತಗೊಂಡಿರುವುದರಿಂದ ರೈಲು ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ.
ತಗ್ಗು ಪ್ರದೇಶದ ಜನರನ್ನು ಸ್ಥಳಾಂತರಿಸುವಂತೆ ಗುಜರಾತ್ ಸರ್ಕಾರ ಆಯಾ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದೆ. ಈ ಸಂಬಂಧ ಮುಖ್ಯಮಂತ್ರಿ ವಿಜಯ್ ರುಪಾನಿ ನಿನ್ನೆ ಸಂಜೆ ಸಭೆ ಕರೆದು ಮಳೆಯಿಂದಾಗಿರುವ ಅನಾಹುತಗಳು ಮತ್ತು ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.
ತುರ್ತು ಪರಿಹಾರ ಕಾರ್ಯದಲ್ಲಿ ಸ್ಥಳೀಯರು ಸಹಕರಿಸುವಂತೆ ಕೋರಲಾಗಿದೆ. ಅಹಮದಾಬದ್, ಸೂರತ್ ಮತ್ತು ಪಂಚ್‍ಮಹಲ್ ಸೇರಿದಂತೆ ಗುಜರಾತ್‍ನ ಹಲವೆಡೆ ಭಾರೀ ಮಳೆಯಾಗಿದೆ. ಇನ್ನು ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಹವಾಮಾನ ಇಲಾಖೆ ತಿಳಿಸಿದೆ.
ಅಜ್ವಾ ನದಿಯಲ್ಲಿ ನೀರಿನ ಮಟ್ಟ ಅಪಾಯಕಾರಿಯಾಗಿ ಏರುತ್ತಿರುವುದರಿಂದ, ಅಗತ್ಯವಿದ್ದಲ್ಲಿ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆಗೆ ಸೈನ್ಯದ ಎರಡು ದಳಗಳನ್ನು ಸಿದ್ದಗೊಳಿಸಲಾಗಿದೆ.