ಆ.7ರಂದು ಜೆಡಿಎಸ್‍ನ ನಿಷ್ಠಾವಂತ ಕಾರ್ಯಕರ್ತರ ಸಮಾವೇಶ

ಬೆಂಗಳೂರು, ಆ.1- ಆಗಸ್ಟ್ 7ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಸಮಾವೇಶಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬಹಿರಂಗ ಆಹ್ವಾನ ನೀಡಿದ್ದಾರೆ.

ಪಕ್ಷಕ್ಕೆ ನಿಷ್ಠರಾಗಿರುವ ಮತ್ತು ಜೆಡಿಎಸ್ ಪಕ್ಷವನ್ನು ಕಟ್ಟೇ ಕಟ್ಟುತ್ತೇವೆ ಎಂಬ ಹಠ ತೊಟ್ಟಿರುವ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ತಯಾರಿಸುವ ಉದ್ದೇಶದಿಂದ ಅರಮನೆ ಮೈದಾನದಲ್ಲಿ ನಿಷ್ಠಾವಂತ ಕಾರ್ಯಕರ್ತರ ಸಮಾವೇಶ ನಡೆಸಲಾಗುತ್ತಿದೆ.

ರಾಜ್ಯದ ಜನರಿಗೆ ಪ್ರಾದೇಶಿಕ ಪಕ್ಷವೊಂದರ ಅನಿವಾರ್ಯತೆ ಅಥವಾ ಅಗತ್ಯ ಇಂದಲ್ಲ ನಾಳೆ ಅರಿವಾಗುತ್ತದೆ ಎಂಬ ವಿಶ್ವಾಸ ನಮ್ಮದು. ಅದಕ್ಕಾಗಿ ಜೆಡಿಎಸ್ ಪಕ್ಷವನ್ನು ಉಳಿಸಿ ಬೆಳೆಸಬೇಕು. ಹಿಂದೆ ಆಗಿರುವ ತಪ್ಪುಗಳನ್ನು ತಿದ್ದುಕೊಂಡು ಹೊಸ ಹೆಜ್ಜೆ ಇಡಬೇಕೆಂದು ಬಹಿರಂಗ ಆಹ್ವಾನ ಪತ್ರದಲ್ಲಿ ಗೌಡರು ತಿಳಿಸಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು, ಮಾಜಿ ಸಚಿವರು, ವಿಧಾನಸಭೆ, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ಮಾಜಿ ಸಂಸದರು, 2018ರ ವಿಧಾನಸಭೆ ಹಾಗೂ 2019ರ ಲೋಕಸಭೆ ಚುನಾವಣೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಜಿಲ್ಲಾ ಹಾಗೂ ರಾಜ್ಯಮಟ್ಟದ ಪಕ್ಷದ ಪದಾಧಿಕಾರಿಗಳು ಸೇರಿದಂತೆ ನಿಷ್ಠಾವಂತ ಕಾರ್ಯಕರ್ತರಿಗೆ ಆಹ್ವಾನ ನೀಡಿದ್ದಾರೆ.

ಜನತಾ ಪರಿವಾರದ ವಾರಸುದಾರ ಪಕ್ಷವಾದ ಜೆಡಿಎಸ್‍ನ್ನು ಕನ್ನಡ ನಾಡಿನ ಜನರ ಆಶೋತ್ತರಗಳ ಈಡೇರಿಕೆಗಾಗಿ ಒಂದು ಬಲಿಷ್ಠ ಪ್ರಾದೇಶಿಕ ಪಕ್ಷವನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಕಳೆದ 20 ವರ್ಷಗಳಿಂದ ಹರಸಾಹಸ ಮಾಡಲಾಗುತ್ತಿದೆ. ಅಧಿಕಾರ ಅಂತಸ್ತು ಬಯಸದೆ, ಬಯಸಿದರೂ ಸಿಕ್ಕದೇ ಹೋದಾಗ ನಿರಾಶರಾಗದೆ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿರುವ ಕಾರ್ಯಕರ್ತರ ನಿಷ್ಠೆ, ಪರಿಶ್ರಮ, ತ್ಯಾಗದ ಫಲವಾಗಿ ಜೆಡಿಎಸ್ ತನ್ನ ಎಲ್ಲ ಏಳುಬೀಳುಗಳ ಮಧ್ಯೆಯೂ ಜೀವಂತವಾಗಿ ಅಸ್ತಿತ್ವವನ್ನು ಕಂಡುಕೊಂಡಿದೆ.

ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಆಘಾತ ಉಂಟಾಗಿದೆ. ಇದಕ್ಕೆ ಕಾರಣ ರಾಜಕೀಯ ಬೆಳೆವಣಿಗೆ ತೆಗೆದುಕೊಂಡ ತಿರುವುಗಳು, ಕೆಲವರು ಪಕ್ಷಕ್ಕೆ ಬಗೆದ ದ್ರೋಹ, ಕಾರ್ಯಕರ್ತರನ್ನು ಕಡೆಗಣಿಸಿದ ನಮ್ಮ ಪ್ರಮಾದಗಳಿಂದ ಚುನಾವಣೆಯಲ್ಲಿ ಹಿನ್ನಡೆಯಾಗಿದೆ.

ಪಕ್ಷ ಇಂದು ಸಂಕಷ್ಟದಲ್ಲಿದೆ. ಅದನ್ನು ಕಟ್ಟಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಜಾರಿಗೊಳಿಸಿದ ರೈತರ ಸಾಲಮನ್ನಾ, ಬಡವರ ಬಂಧು, ಋಣಮುಕ್ತ ಕಾಯ್ದೆಯಂತಹ ಪ್ರಮುಖ ಕಾರ್ಯಕ್ರಮಗಳು ಮಸಕಾಗುವಷ್ಟರಮಟ್ಟಿಗೆ ಅಸಯ್ಯ ರಾಜಕೀಯ ಬೆಳವಣಿಗೆಗಳಾಗಿವೆ ಎಂದು ಗೌಡರು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ