ಬೆಂಗಳೂರು, ಜು.31- ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಒಪಿ ಗಣೇಶಮೂರ್ತಿಗಳನ್ನು ಮಾರಾಟಮಾಡುವವರು, ತಯಾರಿಸುವವರು ಹಾಗೂ ಗೋಡೋನ್ಗಳಲ್ಲಿ ಸಂಗ್ರಹಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಯುಕ್ತ ಮಂಜುನಾಥ್ ಪ್ರಸಾದ್ ಆರೋಗ್ಯ ಅಧಿಕಾರಿಗಳಿಗೆ ಇಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗಣೇಶ ಚುತರ್ಥಿ ಹಿನ್ನೆಲೆಯಲ್ಲಿ ಪಿಒಪಿ ಗಣೇಶ ಮೂರ್ತಿ ನಿಷೇಧಿಸುವ ಕುರಿತು ಇಂದು ಹಮ್ಮಿಕೊಂಡಿದ್ದ ಸಭೆಯಲ್ಲಿ ಈ ಸೂಚನೆ ನೀಡಿದ ಆಯುಕ್ತರು, ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವ ಸ್ಥಳ, ತಯಾರಿಸುವ ಜಾಗ ಹಾಗೂ ಗೋಡೋನ್ಗಳಿಗೆ ಭೇಟಿ ನೀಡಿ ಅವುಗಳನ್ನು ಮುಲಾಜಿಲ್ಲದೆ ಜಪ್ತಿ ಮಾಡಬೇಕು.ಜತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಹೇಳಿದರು.
ಸಾರ್ವಜನಿಕರು ಗಣೇಶಚತುರ್ಥಿಯಂದು ಬಣ್ಣಲೇಪಿತ ಮೂರ್ತಿಗಳನ್ನು ಬಳಸಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಆದರೂ ನಗರದಲ್ಲಿ ಇವುಗಳಿಗೆ ಕಡಿವಾಣ ಬಿದ್ದಿಲ್ಲ. ಆರೋಗ್ಯಾಧಿಕಾರಿಗಳು ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಮತ್ತು ಪಿಒಪಿ ಮೂರ್ತಿಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕೆಂದು ಸೂಚಿಸಿದರು.
ನಗರಕ್ಕೆ ಹೊರ ರಾಜ್ಯಗಳಿಂದ ಪಿಒಪಿ ಗೌರಿ-ಗಣೇಶ ಮೂರ್ತಿಗಳು ಬರದಂತೆ ಮಾಡಲು ಹಾಗೂ ಇವುಗಳನ್ನು ತಯಾರಿಸುವ ಮತ್ತು ಮರಾಟ ಮಾಡುವ ಸ್ಥಳಗಳಿಗೆ ಪೊಲೀಸ್ ಭದ್ರತೆ ನೀಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಈ ಬಾರಿ ಪಿಒಪಿ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಹಾಗೂ ಕೆರೆಗಳಲ್ಲಿ ವಿಸರ್ಜನೆ ಮಾಡಲು ಖಂಡಿತಾ ಅನುಮತಿ ನೀಡುವುದಿಲ್ಲ. ಕಳೆದ ವರ್ಷದಂತೆ ಈ ಬಾರಿಯೂ ಬಿಬಿಎಂಪಿ, ಬೆಸ್ಕಾಂ, ಪೊಲೀಸ್ ಇಲಾಖೆಯಿಂದ ಏಕಗವಾಕ್ಷಿ ಪದ್ದತಿಯಲ್ಲೇ ಗಣೇಶಮೂರ್ತಿಗಳನ್ನು ಕೂರಿಸಲು ಅನುವು ಮಾಡಿಕೊಡಲಾಗುವುದು ಎಂದರು.
ಪಾಲಿಕೆ ಮೈದಾನಗಳಲ್ಲಿ ಕೂರಿಸುವ ಗಣೇಶಮೂರ್ತಿಗಳಿಗೆ ನೆಲಬಾಡಿಗೆಯನ್ನು ಸಂಗ್ರಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಮಂಜುನಾಥ್ ಪ್ರಸಾದ್, ನಗರದಲ್ಲಿರುವ ಪ್ರಮುಖ ಕೆರೆಗಳ ಬಳಿ ತಾತ್ಕಾಲಿಕ ಹೊಂಡಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು. ಸಂಚಾರಿ ವಿಸರ್ಜನಾ ತೊಟ್ಟಿಗಳನ್ನು ಎಲ್ಲೆಲ್ಲಿ ನಿರ್ಮಾಣ ಮಾಡಬೇಕು ಎಂಬ ಪಟ್ಟಿಯನ್ನು ಸಿದ್ದಪಡಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮೇಯರ್ ಗಂಗಾಂಬಿಕೆ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್, ಪಾಲಿಕೆ ಆರೋಗ್ಯಾಧಿಕಾರಿಗಳು, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರು, ವಲಯ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್ ಸೇರಿದಂತೆ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.