ಶಾಸಕಾಂಗದಷ್ಟೇ ಜವಾಬ್ದಾರಿ ಕಾರ್ಯಾಂಗದ ಮೇಲೂ ಇದೆ-ನೂತನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾವೇರಿ

ಬೆಂಗಳೂರು, ಜು.31- ಸಾಮಾನ್ಯ ಜನರ ಧ್ವನಿಯಾಗಲು ಎಲ್ಲಾ ಸದಸ್ಯರು ಬದ್ಧತೆಯಿಂದ ಅರ್ಥಪೂರ್ಣ ಚರ್ಚೆ ಮಾಡುವ ಮೂಲಕ ಸದನದ ಘನತೆ, ಗೌರರವನ್ನು ಹೆಚ್ಚಿಸುವ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ನೂತನ ಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ತಿಳಿಸಿದರು.

ವಿಧಾನಸಭೆಯಲ್ಲಿಂದು ಅವಿರೋಧವಾಗಿ ಆಯ್ಕೆಯಾದ ನಂತರ ಹಲವು ಸದಸ್ಯರು ಅಭಿನಂದಿಸಿ ಮಾತನಾಡಿದ ನಂತರ ಸಭಾಧ್ಯಕ್ಷರು ಮಾತನಾಡಿ, ಶಾಸಕಾಂಗದಷ್ಟೇ ಜವಾಬ್ದಾರಿ ಕಾರ್ಯಾಂಗದ ಮೇಲೂ ಇದೆ ಎಂದರು.

ತಾವು 1994ರಿಂದಲೂ ಇದುವರೆಗೆ ಆರು ಬಾರಿ ಚುನಾಯಿತರಾಗಿದ್ದು, ಈಗ ವಿಧಾನಸಭೆಯ 22ನೇ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಕ್ತಿ ತುಂಬುದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿ, ಬದ್ಧತೆಯಾಗಿದ್ದು, ಸಂವಿಧಾನದ ಚೌಕಟ್ಟಿನೊಳಗೆ ರೂಪಿತವಾಗಿರುವ ಕಾನೂನು ಹಾಗೂ ನಿಯಮಗಳನ್ನು ಪಾಲಿಸಬೇಕಾಗಿದೆ. ಸಂವಿಧಾನವನ್ನು ಭಗವದ್ಗೀತೆ ಎಂದು ಕರೆಯಬಹುದು. ಸಾಮಾನ್ಯ ಜನರ ಕಷ್ಟಗಳು ದೂರವಾಗಿಲ್ಲ. ನಾಗರಿಕ ಸೌಲಭ್ಯಗಳ ಕೊರತೆ ಇದೆ.ಜೀವನ ನಡೆಸಲು ಕಷ್ಟವಿದೆ. ಹೀಗಾಗಿ ನಾಡಿನ ಜನರ ಆಶೋತ್ತರಗಳಿಗೆ ಅನುಗುಣವಾಗಿ ಆಡಳಿತ ನಡೆಸುವ ವಿಶ್ವಾಸವಿದೆ ಎಂದು ತಿಳಿಸಿದರು.

ತಮ್ಮ ತಂದೆ-ತಾಯಿ, ಕ್ಷೇತ್ರ ಹಾಗೂ ನಾಡಿನ ಜನರು, ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೂ ಹೃದಯ ಪೂರ್ವ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಅಲ್ಲದೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಮಾತನಾಡಿದ ಸದಸ್ಯರೆಲ್ಲರೂ ನಾಡಿನ ಜನರ ಕಷ್ಟ ದೂರ ಮಾಡುವ ಕೆಲಸವಾಗಬೇಕೆಂಬ ಭಾವನೆ ವ್ಯಕ್ತಪಡಿಸಿದ್ದೀರಿ. ತಾವು ಕೃಷಿಯ ಜತೆಗೆ ಆರ್‍ಎಸ್‍ಎಸ್, ಎಬಿವಿಪಿ ಮತ್ತು ಬಿಜೆಪಿಯ ಸಂಪರ್ಕದಿಂದ ಶಾಸನ ಸಭೆಗೆ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು.

ಸಭಾಧ್ಯಕ್ಷರಾಗಿ ಕೆ.ಆರ್.ಪೇಟೆ ಕೃಷ್ಣ, ಜಗದೀಶ್‍ಶೆಟ್ಟರ್, ಕೆ.ಜಿ.ಬೋಪಯ್ಯ, ಕಾಗೋಡು ತಿಮ್ಮಪ್ಪ, ಕೆ.ಬಿ.ಕೋಳಿವಾಡ, ರಮೇಶ್‍ಕುಮಾರ್ ಅವರು ಕಾರ್ಯ ನಿರ್ವಹಿಸಿರುವುದನ್ನು ಸದನದ ಸದಸ್ಯನಾಗಿ ನೋಡಿದ್ದೇನೆ. ಸದನದ ಘನತೆ, ಗೌರವ, ಪಾವಿತ್ರತೆಯ ಅರಿವು ನಮ್ಮೆಲ್ಲರಿಗೂ ಇದೆ. ಸದನದ ಭವ್ಯ ಪರಂಪರೆಯ ಕಡೆಗೆ ಹಿಂದಿರುಗಿ ನೋಡಿದರೆ ನಮ್ಮ ನಮ್ಮ ಜವಾಬ್ದಾರಿ ಅರಿವಾಗುತ್ತದೆ. 1952ರಿಂದ ರಮೇಶ್‍ಕುಮಾರ್ ಅವರ ವರೆಗೆ 21 ಮಂದಿ ಸಭಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಜನರ ಕಷ್ಟ-ಸುಖಗಳಿಗೆ ಧನಿಯಾಗುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮೌಲ್ಯಗಳು ಕಳೆಗುಂದುತ್ತಿದ್ದು, ಸರಿ ಮಾಡುವ ಬದ್ಧತೆಯನ್ನು ಕ್ಷಣಕ್ಷಣಕ್ಕೆ ತೋರಿಸಬೇಕು. ಬದ್ಧತೆಯಲ್ಲಿ ಯಾವ ಕೊರತೆಯೂ ಆಗಬಾರದು. ಸದನದಲ್ಲಿ ಪೂರ್ಣ ಸಮಯ ಕಳೆಯಬೇಕು. ಸದಸ್ಯರು ಇರುವ ಮೂಲಕ ಜನರ ವಿಶ್ವಾಸವನ್ನು ಗಳಿಸುವ ಪ್ರಯತ್ನ ಮಾಡಬೇಕೆಂದು ಗಮನ ಸೆಳೆದರು.

ಇದಕ್ಕೂ ಮುನ್ನ ಮಾತನಾಡಿದ ಮಾಜಿ ಸಚಿವ ಕೃಷ್ಣಬೈರೇಗೌಡ, ರಾಜ್ಯದ ಹಿತದೃಷ್ಟಿಯಿಂದ ಸಭಾಧ್ಯಕ್ಷರ ಸ್ಥಾನದಲ್ಲಿ ಕುಳಿತವರು ಸಮಾನ ದೃಷ್ಟಿಕೋನದಿಂದ ಕಾರ್ಯನಿರ್ವಹಿಸಬೇಕು. ಪ್ರತಿ ಪಕ್ಷದ ಕಡೆ ಹೆಚ್ಚು ಒಲವು ತೋರಿದರೆ ಸರ್ಕಾರದ ಜವಾಬ್ದಾರಿಯೂ ಹೆಚ್ಚಾಗುತ್ತದೆ. ಸದನದ ಸದಸ್ಯರನ್ನು ಸರಿದಾರಿಗೆ ಕರೆದೊಯ್ಯುವ ಸಾಮಥ್ರ್ಯವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಎಸ್‍ಪಿ ಶಾಸಕ ಎನ್.ಮಹೇಶ್ ಮಾತನಾಡಿ, ಬುದ್ದಿವಂತ ಭಾವಜೀವಿಯಾಗಿ ಸದನ ನಡೆಸುತ್ತೀರಿ ಎಂಬ ವಿಶ್ವಾಸ ಸಭಾಧ್ಯಕ್ಷರ ಮೇಲಿದೆ. ಹಲವು ಧರ್ಮ ಮತ್ತು ಜಾತಿ ಮೀರಿದ ಆತ್ಮ ಭಾರತೀಯದ್ದು, ಅದಕ್ಕೆ ನ್ಯಾಯ ಒದಗಿಸಲು ತಾವು ಅರ್ಹರೆಂಬುದು ತಮ್ಮ ಭಾವನೆ. ಕಟ್ಟಕಡೆಯ ಮನುಷ್ಯನಿಗೂ ಸೌಲಭ್ಯಗಳು ದೊರಕಿಸುವ ರೀತಿಯಲ್ಲಿ ಸದನದಲ್ಲಿ ಕೆಲಸ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಗೋವಿಂದ ಕಾರಜೋಳ, ಕೆ.ಎಂ.ಶಿವಲಿಂಗೇಗೌಡ ಅವರೂ ಕೂಡ ಸಭಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ