ಬೆಂಗಳೂರು, ಜು.31- ಬಿಜೆಪಿಯ ಮೇಯರ್ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ತಿಳಿಸಿದ್ದಾರೆ.
ಬೈರತಿ ಬಸವರಾಜ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬಸವರಾಜ್ ಅವರು ನನಗೆ ಆತ್ಮೀಯರು. ಸ್ನೇಹದ ವಿಚಾರವಾಗಿ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದೇನೆ. ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕೆಆರ್ ಪುರ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವಲ್ಲಿ ಬೈರತಿ ಬಸವರಾಜ ಅವರ ಪಾತ್ರ ಮಹತ್ತರವಾದದ್ದು. ಅನುದಾನ ಬಳಕೆ ಕುರಿತಂತೆ ಅವರ ಜತೆ ಚರ್ಚೆ ಮಾಡಿಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಬಿಬಿಎಂಪಿಯ ಕೊನೆ ಮೇಯರ್ ಸ್ಥಾನ ಬಿಜೆಪಿಗೆ ಲಭಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪದ್ಮನಾಭರೆಡ್ಡಿ ಅವರು ಬೈರತಿ ಬಸವರಾಜ ನಿವಾಸಕ್ಕೆ ಭೇಟಿ ನೀಡಿರುವುದು ಕುತೂಹಲಕ್ಕೆ ಎಡೆಮಾಡಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಮೇಯರ್ ಚುನಾವಣೆ ಬಗ್ಗೆ ಬಿಜೆಪಿ ತೀರ್ಮಾನ ಕೈಗೊಳ್ಳುತ್ತದೆ.ನಾವು 102 ಸದಸ್ಯರಿದ್ದೇವೆ. ಮೇಯರ್ ಆಗುವ ಅರ್ಹತೆ ಇರುವವರು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಮುಂದಿನ ಮೇಯರ್ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಮ್ಮ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.