ಬೆಂಗಳೂರು, ಜು.31- ನ್ಯಾಷನಲ್ ಮೆಡಿಕಲ್ ಕಮಿಷನ್ ಬಿಲ್ ವಿರೋಧಿಸಿ ಖಾಸಗಿ ವೈದ್ಯರು ದೇಶಾದ್ಯಂತ ಮುಷ್ಕರ ನಡೆಸಿದ್ದರಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಿ ಸಾರ್ವಜನಿಕರು ಪರದಾಡಿದಂತಹ ವಾತಾವರಣ ನಿರ್ಮಾಣವಾಯಿತು.
ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ನೂತನ ಕಾನೂನನ್ನು ವಿರೋಧಿಸಿ ಇಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೂ ಭಾರತೀಯ ವೈದ್ಯರ ಸಂಘದ ನೇತೃತ್ವದಲ್ಲಿ ದೇಶಾದ್ಯಂತ ಮುಷ್ಕರ ನಡೆಯಿತು.
ಈ ಸಂದರ್ಭದಲ್ಲಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದ ಚಿಕಿತ್ಸೆಯನ್ನು ಸ್ಥಗಿತಗೊಳಿಸಲಾಗಿತ್ತು.ಖಾಸಗಿ ಆಸ್ಪತ್ರೆಗಳ ವೈದ್ಯರು ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ಹೀಗಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ರೋಗಿಗಳು ನರಳಾಡಿದರು.ಕೆಲವರು ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದರು.ಆದರೆ, ಸರ್ಕಾರಿ ಆಸ್ಪತ್ರೆಗಳ ಕೆಲ ವೈದ್ಯರು ಕೂಡ ಮುಷ್ಕರದಲ್ಲಿ ಭಾಗವಹಿಸಲು ತೆರಳಿದ್ದರಿಂದ ಜನಸಾಮಾನ್ಯರಿಗೆ ತೊಂದರೆಯಾಯಿತು.
ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಪೂರ್ಣ ಪ್ರಮಾಣದ ಸಿಬ್ಬಂದಿ ಹಾಗೂ ವೈದ್ಯರು ಕೆಲಸ ನಿರ್ವಹಿಸಬೇಕೆಂದು ಸೂಚನೆ ನೀಡಿತ್ತು.
ಆರೋಗ್ಯ ಇಲಾಖೆಯ ಆಯುಕ್ತರಾದ ಪಂಕಜ್ಕುಮಾರ್ ಪಾಂಡೆ ಅವರು ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದ ವೈದ್ಯಕೀಯ ಸೌಲಭ್ಯ ಸಿಗುವಂತೆ ಎಚ್ಚರಿಕೆ ವಹಿಸಬೇಕು.ಈ ಸಂದರ್ಭದಲ್ಲಿ ಯಾರೂ ರಜೆ ಹಾಕಬಾರದು ಎಂದು ಸುತ್ತೋಲೆ ರವಾನಿಸಿದ್ದರು.
ಆದರೂ ಕೆಲವು ಸರ್ಕಾರಿ ವೈದ್ಯರು ಆಸ್ಪತ್ರೆಗೆ ಬಂದು ಕೆಲ ಕಾಲವಿದ್ದು, ನಂತರ ಮುಷ್ಕರಕ್ಕೆ ಹೋಗಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಸಾರ್ವಜನಿಕರ ಕೂಗು ಕೇಳವವರಿಲ್ಲದಂತಾಗಿತ್ತು.