ಲಂಡನ್ ಜು.31- ಕೆಫೆ ಕಾಫಿ ಡೇ(ಸಿಸಿಡಿ) ಸಂಸ್ಥಾಪಕ ವಿ.ಜಿ.ಸಿದ್ದಾರ್ಥ್ ಹೆಗಡೆ ದುರಂತದ ಬಗ್ಗೆ ಪ್ರತಿಕ್ರಿಯಿಸಿ ಆರ್ಥಿಕ ಅಪರಾಧಿ ಮತ್ತು ದೇಶ ಭ್ರಷ್ಟ ಕಳಂಕಿತ ಉದ್ಯಮಿ ವಿಜಮ್ ಮಲ್ಯ ಸರ್ಕಾರದ ಅಧಿಕಾರಿಗಳು ಮತ್ತು ಬ್ಯಾಂಕುಗಳು ಯಾರನ್ನು ಬೇಕಾದರೂ ಘಾಸಿಗೊಳಿಸಿ ಅವರ ಜೀವನದೊಂದಿಗೆ ಚೆಲ್ಲಾಟವಾಡುತ್ತವೆ ಎಂದು ಆರೋಪಿಸಿದ್ದಾರೆ.
ಸಿದ್ಧಾರ್ಥ್ಗೆ ಆದ ಪರಿಸ್ಥಿತಿಯೇ ನನಗೂ ಆಗುತ್ತಿದೆ ಎಂದು ಉದ್ಯಮಿ ಮಲ್ಯ ಹೇಳಿದ್ದಾರೆ.
ಭಾರತೀಯ ಬ್ಯಾಂಕ್ಗಳಿಂದ ಸಾವಿರಾರು ಕೋಟಿ ಸಾಲ ಪಡೆದು, ಮರುಪಾವತಿ ಮಾಡದೇ ಲಂಡನ್ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಸಿಸಿಡಿ ಉದ್ಯಮಿ ಸಿದ್ಧಾರ್ಥ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ವಿಜಯ್ ಮಲ್ಯ, ನಾನು ವಿ.ಜಿ ಸಿದ್ದಾರ್ಥ್ ಅವರೊಂದಿಗೆ ಪರೋಕ್ಷವಾಗಿ ಸಂಬಂಧ ಹೊಂದಿದ್ದೇನೆ. ಅವರೊಬ್ಬ ಒಳ್ಳೆಯ ವ್ಯಕ್ತಿ ಹಾಗೂ ಉತ್ತಮ ಉದ್ಯಮಿ. ಅವರ ಪತ್ರದಲ್ಲಿರೋ ಸಾರಾಂಶ ನೋಡಿ ನನ್ನ ಹೃದಯ ನುಚ್ಚುನಾರಾಯ್ತು. ಸರ್ಕಾರಿ ಏಜೆನ್ಸಿಗಳು ಹಾಗೂ ಬ್ಯಾಂಕ್ಗಳು ಎಂಥವರನ್ನೂ ಹತಾಶೆಗೆ ದೂಡಿಬಿಡುತ್ತವೆ. ನಾನು ಸಂಪೂರ್ಣ ಸಾಲ ಮರುಪಾವತಿ ಮಾಡುತ್ತೇನೆ ಎಂದರೂ ನನಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ವಿದೇಶಗಳಲ್ಲಿ ಅಲ್ಲಿನ ಸರ್ಕಾರ ಮತ್ತು ಬ್ಯಾಂಕ್ ಗಳು ಸಾಲಗಾರರು ಮಾಡಿದ ಸಾಲ ತೀರಿಸುವಲ್ಲಿ ಸಹಾಯ ಮಾಡುತ್ತವೆ. ಆದರೆ ನನ್ನ ವಿಚಾರದಲ್ಲಿ ಇದು ತದ್ವಿರುದ್ಧವಾಗಿದೆ. ನಾನು ಸಾಲ ತೀರಿಸಲು ಮಾಡಿದ ಪ್ರತಿ ಪ್ರಯತ್ನದಲ್ಲೂ ಸರ್ಕಾರ ಮತ್ತು ಬ್ಯಾಂಕ್ಗಳು ತಡೆಗೋಡೆಯಾಗಿ ನಿಂತಿವೆ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.