ಲಾಹೋರ್,ಜು.30- ಭಾರತ-ಪಾಕಿಸ್ತಾನ ವಿಭಜನೆಯ ನಂತರ ಮುಚ್ಚಲ್ಪಟ್ಟಿದ್ದ ಪೂರ್ವನಗರ ಸಿಯಾಲ್ಕೋಟ್ನಲ್ಲಿರುವ 1000 ವರ್ಷಗಳ ಪ್ರಾಚೀನ ಹಿಂದೂ ದೇವಾಲಯದಲ್ಲಿ ಈಗ ಪೂಜೆಗೆ ಅನುವು ಮಾಡಿಕೊಡಲಾಗಿದೆ.
ಇದು ಉಭಯ ದೇಶಗಳ ನಡುವೆ ಸಂಬಂಧ ಬಲವರ್ಧನೆ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿದೆ.
ಲಾಹೋರ್ನಿಂದ 100 ಕಿ.ಮೀ ದೂರದ ಧಾರೊವಾಲ್ ವ್ಯಾಪ್ತಿಗೆ ಬರುವ ಸಿಯಾಲ್ಕೋಟ್ನಲ್ಲಿ ಶವಾಲ ತೇಜ್ ಸಿಂಗ್ ದೇವಸ್ಥಾನವಿದ್ದು, ಸಾವಿರ ವರ್ಷಗಳ ಹಳೆಯದಾದ ದೇಗುಲ ಇದಾಗಿದೆ ಎಂದು ದಿ.ರಶೀದ್ ನಿಯಾಜ್ ಅವರು ಬರೆದಿರುವ ಹಿಸ್ಟರಿ ಆಫ್ ಸಿಯಾಲ್ಕೋಟ್ನಲ್ಲಿ ಉಲ್ಲೇಖಿಸಲಾಗಿದೆ.
ಪಾಕಿಸ್ತಾನದ ಅಲ್ಪಸಂಖ್ಯಾತರ ಸ್ವತ್ತುಗಳನ್ನು ನಿರ್ವಹಿಸುವ ಮೇಲುಸ್ತುವಾರಿ ವಹಿಸಿರುವ ದಿ ಎವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್(ಸ್ಥಳಾಂತರ ವಿಶ್ವಸ್ಥ ಸ್ವತ್ತು ಮಂಡಳಿ) ಈಗ ಈ ಪುರಾತನ ಹಿಂದೂ ದೇವಾಲಯವನ್ನು ಭಕ್ತರಿಗಾಗಿ ಮುಕ್ತಗೊಳಿಸಲಾಗಿದೆ ಎಂದು ಮಂಡಳಿ ವಕ್ತಾರ ಅಮಿರ್ ಹಶ್ಮಿ ತಿಳಿಸಿದ್ದಾರೆ.
ಹಿಂದೆ ಈ ಪ್ರಾಂತ್ಯದಲ್ಲಿ ಹಿಂದೂಗಳ ಸಂಖ್ಯೆ ಇಲ್ಲದ ಕಾರಣ ಈ ದೇವಾಲಯವನ್ನು ಮುಚ್ಚಲಾಗಿತ್ತು. 1992ರಲ್ಲಿ ಉತ್ತರಪ್ರದೇಶದ ಅಯೋಧ್ಯೆ ಬಾಬರಿ ಮಸೀದಿ ಧ್ವಂಸಕ್ಕೆ ಪ್ರತೀಕಾರವಾಗಿ ಇಲ್ಲಿನ ಹಿಂದೂ ದೇವಾಲಯಗಳ ಮೇಲೆ ನಡೆದ ಆಕ್ರಮಣದಲ್ಲಿ ಈ ದೇವಾಲಯ ಭಾಗಶಃ ಹಾನಿಯಾಗಿತ್ತು.
ಮಂಡಳಿಯ ಅಧ್ಯಕ್ಷ ಅಮಿರ್ ಅಹಮ್ಮದ್ ಅವರ ಇತ್ತೀಚಿನ ನಿರ್ದೇಶನದ ಮೇರೆಗೆ ಹಿಂದೂ ಮಂದಿರದ ನವೀಕರಣ ಕಾರ್ಯವನ್ನು ಕೈಗೊಳ್ಳಲಾಗಿತ್ತು ಎಂದು ಅಶ್ಮಿ ವಿವರಿಸಿದ್ದಾರೆ.
ಈ ದೇವಾಲಯದ ಮರು ನವೀಕರಣ ಕಾರ್ಯ ಅಂತಿಮ ಹಂತದಲ್ಲಿದ್ದು, ಸಣ್ಣಪುಟ್ಟ ಕಾರ್ಯಗಳು ಬಾಕಿ ಇವೆ. ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಹಿಂದೂ ಭಕ್ತರ ಭೇಟಿ ಮತ್ತು ದರ್ಶನಕ್ಕೆ ಇದರಿಂದ ಅಡ್ಡಿಯಾಗದು ಎಂದು ಮಂಡಳಿಯ ಉಪನಿರ್ದೇಶಕ ಫ್ರಾಜ್ ಅಬ್ಬಾಸ್ ತಿಳಿಸಿದ್ದಾರೆ.
ಇಂಡೋ-ಪಾಕ್ ವಿಭಜನೆ ನಂತರ ಇದೇ ಮೊದಲ ಬಾರಿಗೆ ಹಿಂದೂ ಭಕ್ತರಿಗೆ ಈ ದೇವಸ್ಥಾನ ಮುಕ್ತಗೊಳ್ಳುತ್ತಿರುವುದು ಪಾಕಿಸ್ತಾನದಲ್ಲಿರುವ ಹಿಂದೂ ಸಮುದಾಯದವರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ 400 ವರ್ಷಗಳಷ್ಟು ಹಳೆಯದಾದ ಗುರುನಾನಕ್ ದೇವ್ ಜೀ ಅವರಿಂದ ನಿರ್ಮಿಸಿದ್ದ ಗುರುದ್ವಾರ ಭಾರತದ ಸಿಖ್ ಸಮುದಾಯದವರ ಪ್ರವೇಶಕ್ಕೆ ಅನುವು ಮಾಡಿಕೊಡುವ ಬಗ್ಗೆ ಪಾಕಿಸ್ತಾನ ಕ್ರಮ ಕೈಗೊಳ್ಳುತ್ತಿರುವ ಬೆನ್ನಲ್ಲೇ ಈಗ ಶವಾಲ್ ತೇಜ್ ಸಿಂಗ್ ಮಂದಿರದ ಬಾಗಿಲು ಹಿಂದೂಗಳಿಗೆ ತೆರೆದಿರುವುದು ಆಶಾದಾಯಕ ಬೆಳವಣಿಗೆ.