ಲೋಕಸಭೆಯಲ್ಲಿ ಕ್ಷಮೆಯಾಚಿಸಿದ ಎಸ್‍ಪಿ ಸಂಸದ ಅಜಂಖಾನ್

ನವದೆಹಲಿ, ಜು. 29– ಬಿಜೆಪಿ ಸಂಸದೆ ರಮಾದೇವಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ವ್ಯಾಪಕ ಖಂಡನೆಗೆ ಒಳಗಾಗಿದ್ದ ಸಮಾಜವಾದಿ ಪಕ್ಷದ ಸಂಸದ ಅಜಂಖಾನ್ ಲೋಕಸಭೆಯಲ್ಲಿಂದು ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಓಂ ಬಿರ್ಲಾ, ಅಜಂಖಾನ್ ಮಾತನಾಡಲು ಅವಕಾಶ ನೀಡಿದರು.

ನಾನು ಒಂಭತ್ತು ಬಾರಿ ಶಾಸಕನಾಗಿ ಕಾರ್ಯನಿರ್ವಹಿಸಿದ್ದೇನೆ. ಹಲವು ಬಾರಿ ಸಚಿವನಾಗಿದ್ದೇನೆ. ರಾಜ್ಯಸಭೆಗೂ ನಾನು ಆಯ್ಕೆಯಾಗಿದ್ದೆ. ಕೆಲಕಾಲ ಸಂಸದೀಯ ವ್ಯವಹಾರಗಳ ಸಚಿವನಾಗಿಯೂ ಕರ್ತವ್ಯ ನಿರ್ವಹಿಸಿದ್ದೇನೆ. ಸಂಸತ್ತಿನ ಕಲಾಪಗಳ ಬಗ್ಗೆ ನನಗೆ ಉತ್ತಮ ಜ್ಞಾನವಿದೆ. ಆದಾಗ್ಯೂ ನನ್ನ ಹೇಳಿಕೆಗಳಿಂದ ಯಾರಿಗಾದರೂ ನೋವು ಮತ್ತು ಬೇಸರವಾಗಿದ್ದರೆ ಅದಕ್ಕೆ ನಾವು ಕ್ಷಮೇ ಕೋರುತ್ತೇನೆ ಎಂದು ಅಜಂಖಾನ್ ಹೇಳಿದರು.

ನಂತರ ಮಾತನಾಡಿದ ಸ್ಪೀಕರ್ ಸಂಸದರು ಮಾತನಾಡುವಾಗ ಬಳಸುವ ಪದಗಳು ಮತ್ತು ಹೇಳಿಕೆಗಳ ಬಗ್ಗೆ ಎಚ್ಚರ ವಹಿಸಬೇಕು. ಇಂತಹ ಹೇಳಿಕೆಗಳು ಅನ್ಯರ ಮನಸಿಗೆ ಘಾಸಿಯುಂಟು ಮಾಡಬಾರದೆಂದು ಸಲಹೆ ಮಾಡಿದರು.

ಸದನದಲ್ಲಿ ತಮ್ಮ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಸಂಸದ ಅಜಂಖಾನ್ ಕ್ಷಮೆಯಾಚಿಸುವುದು ಮಾತ್ರವಲ್ಲ, ಐದು ವರ್ಷಗಳ ಕಾಲ ಲೋಕಸಭೆಯಿಂದ ಅಮಾನತ್ತು ಮಾಡಬೇಕೆಂದು ಬಿಜೆಪಿ ಸಂಸದೆ ರಮಾದೇವಿ ಆಗ್ರಹಿಸಿದ್ದರು.

ತ್ರಿವಳಿ ತಲಾಖ್ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಸ್ಪೀಕರ್ ಅನುಪಸ್ಥಿತಿಯಲ್ಲಿ ಕಲಾಪ ನಡೆಸುತ್ತಿದ್ದ ಬಿಜೆಪಿ ಸಂಸದೆ ರಮಾದೇವಿಯವರನ್ನು ಉದ್ದೇಶಿಸಿ ಮಾತನಾಡಿದ ಅಜಂಖಾನ್, ಆಪ್ ಕೀ ಆಂಖೋ ಮೇ ಆಂಖೇ ಡಾಲ್ ಕೇ ಬಾತ್ ಕರ್ ನೇ ಕಾ ಮನ್ ಕರ್ ತಾ ಹೈ (ನಿಮ್ಮ ಕಣ್ಣಲ್ಲಿ ಕಣ್ಣನಿಟ್ಟು ಮಾತನಾಡುವ ಬಯಕೆ ಉಂಟಾಗುತ್ತಿದೆ) ಎಂದು ಹೇಳಿದ್ದರು.

ಸಂಸತ್ತು ಹಾಗೂ ಎಲ್ಲಾ ಸಂಸದರಿಗೂ ಅಜಂಖಾನ್ ಅಪಮಾನ ಮಾಡಿದ್ದು, ಆ ಮಾತುಗಳನ್ನು ಕಡತದಿಂದ ತೆಗೆದುಹಾಕಲಾಗಿದೆ.ಆದರೂ, ಆತ ಬರೀ ಕ್ಷಮೆಯಾಚಿಸಿದರೆ ಸಾಲದು 5 ವರ್ಷಗಳ ಕಾಲ ಸದನದಿಂದಲೇ ಅಮಾನತು ಮಾಡಬೇಕು ಒತ್ತಾಯಿಸಿದ್ದರು.

ಅಜಂಖಾನ್ ಹೇಳಿಕೆಯನ್ನು ಕಲಾಪದಲ್ಲಿಯೂ ತೀವ್ರವಾಗಿ ಖಂಡಿಸಲಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮತ್ತು ಕಾನೂನು ಸಚಿವ ರವಿಶಂಕರ್‍ಪ್ರಸಾದ್ ಸೇರಿದಂತೆ ಬಿಜೆಪಿ ಸಂಸದರು ಖಾನ್ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

ಈಗ ಅಜಂಖಾನ್ ಸದನದಲ್ಲಿ ಕ್ಷಮೆಯಾಚಿಸಿದ್ದ ಹಿನ್ನೆಲೆಯಲ್ಲಿ ವಿವಾದಕ್ಕೆ ತೆರೆ ಬಿದ್ದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ