ಬೆಂಗಳೂರು,ಜು.30-ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಪೂರ್ಣ ಪ್ರಮಾಣದ ಸಂಪುಟ ರಚನೆಗೆ ಬದಲು ಚಿಕ್ಕದಾಗಿ ಚೊಕ್ಕದಾದ ಸಂಪುಟ ರಚಿಸುವ ಚಿಂತನೆಯಲ್ಲಿದ್ದಾರೆ.
ಬುಧವಾರ ನೂತನ ಸ್ಪೀಕರ್ ಆಯ್ಕೆ ನಂತರ ಸಂಪುಟ ರಚನೆಗೆ ಚಿಂತನೆ ನಡೆದಿದ್ದು. ಈ ಸಂಬಂಧ ಸಿಎಂ ಯಡಿಯೂರಪ್ಪ ಗುರುವಾರ ನವದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜೊತೆ ಈ ಕುರಿತು ಚರ್ಚಿಸುವ ಸಾಧ್ಯತೆ ಇದೆ.
ತಮ್ಮ ಸರಕಾರ ರಚನೆಗೆ ನೆರವು ನೀಡಿದ ಹಾಗೂಅನರ್ಹಗೊಂಡಿರುವ ಶಾಸಕರಿಗೂ ಬೇಸರವಾಗದಂತೆ ನೂತನ ಸಂಪುಟ ರಚಿಸುವುದು ಯಡಿಯೂರಪ್ಪನವರ ಉದ್ದೇಶವಾಗಿದ್ದು ಹೆಚ್ಚೆಂದರೆ 18-20 ಶಾಸಕರಿಗೆ ಮಾತ್ರ ಮಂತ್ರಿ ಗಿರಿ ದೊರೆಯುವ ಸಂಭವ ಇದೆ.
ಈ ಮಧ್ಯೆ ಮಂತ್ರಿ ಸ್ಥಾನಕ್ಕಾಗಿ ಹಾತೊರೆಯದ ಬಿಜೆಪಿ ಶಾಸಕರಾರೂ ಇಲ್ಲ. ಹಾಗಾಗಿ ಸಣ್ಣ ಗಾತ್ರದ ಸಂಪುಟ ರಚಿಸಿ ಆಕಾಂಕ್ಷಿಗಳನ್ನು ಹದ್ದುಬಸ್ತಿನಲ್ಲಿಡುವುದು ಬಿಎಸ್ವೈ ಅವರ ಲೆಕ್ಕಾಚಾರವಾಗಿದೆ.
ಇದೆಲ್ಲದರ ನಡುವೆ ನೂತನ ಸಂಪುಟದಲ್ಲಿ ಉಪಮುಖ್ಯಮಂತ್ರಿ ಯಾರಾಗಬಹುದು ಎಂಬ ಲೆಕ್ಕಾಚಾರವೂ ನಡೆದಿದೆ. ಈ ಹಿಂದೆ ಡಿಸಿಎಂಗಳಾಗಿದ್ದ ಆರ್.ಅಶೋಕ್ ಹಾಗೂ ಕೆ.ಎಸ್.ಈಶ್ವರಪ್ಪ ಮತ್ತು ಶ್ರೀರಾಮುಲು ಅವರ ಹೆಸರುಗಳು ಈ ಹುದ್ದೆಗೆ ಕೇಳಿ ಬರುತ್ತಿದೆ.
ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಎರಡು ಉಪ ಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಲಾಗಿತ್ತು.ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದರು.
ಕೆ.ಎಸ್. ಈಶ್ವರಪ್ಪ ಮತ್ತು ಆರ್.ಅಶೋಕ್ ಉಪ ಮುಖ್ಯಮಂತ್ರಿಯಾಗಿದ್ದರು. ಪ್ರಸ್ತುತ ಮತ್ತೆ ಉಪ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಚರ್ಚೆ ಆರಂಭವಾಗಿವೆ.
ಜಾತಿ ಲೆಕ್ಕಾಚಾರದ ಮೇಲೆ ಈ ಬಾರಿಯೂ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡಲಾಗುತ್ತದೆಯೇ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಮೂವರು ನಾಯಕರ ಹೆಸರು ಉಪ ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬರುತ್ತಿವೆ.
ಯಡಿಯೂರಪ್ಪ ಗುರುವಾರ ದೆಹಲಿಗೆ ತೆರಳಲಿದ್ದು, ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ ಮತ್ತು ಉಪ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಹೈಕಮಾಂಡ್ ಒಪ್ಪಿಗೆ ಸಿಕ್ಕಿದರೆ ಶುಕ್ರವಾರವೇ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ.
ಸಂಪುಟ ವಿಸ್ತರಣೆ ಸಂಕಟ:
ಬಿಜೆಪಿ 105 ಶಾಸಕರ ಬಲವನ್ನು ಹೊಂದಿದೆ.ಇವರಲ್ಲಿ ಹಲವರು ಹಿರಿಯ ನಾಯಕರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡುವಾಗ ಹಿರಿಯರು, ಕಿರಿಯರು ಎಲ್ಲರನ್ನೂ ಸೇರಿಸಿಕೊಳ್ಳಬೇಕು. ಸಂಪುಟ ರಚನೆ ವಿಚಾರ ಅಷ್ಟು ಸುಲಭವಾಗಿಲ್ಲ.
ಯಡಿಯೂರಪ್ಪ ತಯಾರು ಮಾಡಿದ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ಸಿಗಲಿದೆಯೇ ಎಂಬ ಪ್ರಶ್ನೆಯೂ ಇದೆ. ಇದರ ಜೊತೆಗೆ ಉಪ ಮುಖ್ಯಮಂತ್ರಿ ಬಗ್ಗೆಯೂ ಚರ್ಚೆ ಆರಂಭವಾಗಿದೆ.
ಮುಂಚೂಣಿಯಲ್ಲಿ ಮೂವರು:
ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ.ಎಸ್. ಈಶ್ವರಪ್ಪ, ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು, ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್.ಅಶೋಕ್ ಹೆಸರುಗಳು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬರುತ್ತಿದ್ದು, ಎರಡು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ.
ಕೆ.ಎಸ್. ಈಶ್ವರಪ್ಪ ಅವರು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಉಪ ಮುಖ್ಯಮಂತ್ರಿಯಾಗಿದ್ದರು. ಪಕ್ಷವನ್ನು ಕಟ್ಟಿ ಬೆಳೆಸಲು ಯಡಿಯೂರಪ್ಪ ಜೊತೆ ಈಶ್ವರಪ್ಪ ಕೂಡ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದ ಪ್ರಭಾವಿ ನಾಯಕನಿಗೆ ಈ ಬಾರಿಯೂ ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಗುತ್ತದೆ ಎಂಬ ನಿರೀಕ್ಷೆ ಇದೆ.
ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಅಶೋಕ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಉಪ ಮುಖ್ಯಮಂತ್ರಿಯಾಗಿದ್ದರು. ಇವರನ್ನು ಉಪ ಮುಖ್ಯಮಂತ್ರಿ ಮಾಡುವ ಮೂಲಕ ರಾಜ್ಯದ ಪ್ರಭಾವಿ ಸಮುದಾಯದ ಓಲೈಕೆಗೆ ಬಿಜೆಪಿ ಮುಂದಾಗಬಹುದು.
ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿ.ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಪಟ್ಟ ನೀಡಬೇಕು ಎಂಬ ಚರ್ಚೆ ಆರಂಭವಾಗಿದೆ. ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕಶ್ರೀರಾಮುಲು ಹೆಸರು ಸಹ ಉಪ ಮುಖ್ಯಮಂತ್ರಿ ಹುದ್ದೆ ರೇಸ್ನಲ್ಲಿ ಕೇಳಿಬರುತ್ತಿದೆ.