ಬೆಂಗಳೂರು, ಜು.30-ಬಡವರು ಮತ್ತು ಜನ ಸಾಮಾನ್ಯರಿಗೆ ದುಬಾರಿ ದರದಿಂದಾಗಿ ಕೈಗೆಟುಕದ ಕೀ ಹೋಲ್ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮತ್ತು ಹೃದಯ ಕವಾಟ ವಾಲ್ವ್ ಬದಲಾವಣೆ ಇದೀಗ ಸಾಮಾನ್ಯರಿಗೂ ಸಿಗುವಂತಾಗಿದೆ.
ನಗರದ ಸಪ್ತಗಿರಿ ಆಸ್ಪತ್ರೆಯ ತಜ್ಞ ವೈದ್ಯರು ತಮ್ಮ ಅಪಾರ ಪರಿಣಿತಿ ಮತ್ತು ದೇಶೀಯವಾಗಿ ಲಭ್ಯವಿರುವ ಪರಿಕರಗಳನ್ನು ಬಳಸಿ ಸಾಮಾನ್ಯರು ಸಹ ದುಬಾರಿ ಚಿಕಿತ್ಸೆಯನ್ನು ಸುಲಭ ದರದಲ್ಲಿ ಪಡೆಯುವಂತೆ ಮಾಡಿದ್ದಾರೆ.
ದೆಹಲಿ ಪ್ರಖ್ಯಾತ ಆಲ್ ಇಂಡಿಯಾ ಮೆಡಿಕಲ್ ಸೈನ್ಸ್ ಏಮ್ಸ್ನ ಖ್ಯಾತ ಹೃದ್ರೋಗ ತಜ್ಞ ವೈದ್ಯರಾದ ಸಪ್ತಗಿರಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ತಮೀಮ್ ಅಹಮದ್, ಏಮ್ಸ್ ನ ಪರಿಣಿತ ವೈದ್ಯರಾದ ಡಾ. ಇಂತಿಕಾ ಆಲಂ, ಡಾಕ್ಟರ್ ಅರುಣ್ ರೆಡ್ಡಿ ಹಾಗೂ ಸ್ಥಳೀಯ ಕಾರ್ಡಿಯಕ್ ಅನೆಸ್ತೇಷಿಯಾ ತಜ್ಞೆ ಡಾ ಪದ್ಮ ನೇತೃತ್ವದ ತಂಡ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದೆ.
ಕೀ ಹೋಲ್ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮತ್ತು ಕವಾಟ ಬದಲಾವಣೆ ಚಿಕಿತ್ಸೆಗೆ ಕನಿಷ್ಠ 6 ಲಕ್ಷ ರೂ ಗಿಂತ ಹೆಚ್ಚು ವೆಚ್ಚವಾಗುತ್ತದೆ. ಆದರೆ ಸಪ್ತಗಿರಿ ಆಸ್ಪತ್ರೆಯ ವೈದ್ಯರ ತಂಡ ಜನ ಸಾಮಾನ್ಯರ ಜತೆಗೆ ಸರ್ಕಾರದ ವಿಮಾ ಯೋಜನೆಗಳಲ್ಲಿ ವಿಮೆ ಪಡೆದವರಿಗೂ ಈ ಸೌಲಭ್ಯ ಕಲ್ಪಿಸಬಹುದು ಎಂಬುದನ್ನು ನಿರೂಪಿಸಿದ್ದಾರೆ.
ಈ ಶಸ್ತ್ರಚಿಕಿತ್ಸೆಗೆ ಒಳಗಾದವರು ನಾಲ್ಕೈದು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು. ಈ ಚಿಕಿತ್ಸೆಯಿಂದ ರಕ್ತ ಕಡಿಮೆ ಪ್ರಮಾಣದಲ್ಲಿ ನಷ್ಟವಾಗಲಿದೆ ಎಂದು ಡಾ.ತಮೀಮ್ ಅಹಮದ್ ಹೇಳುತ್ತಾರೆ.
ಪಶ್ಚಿಮ ಬಂಗಾಲದ 60 ವರ್ಷದ ರೈತರಾದ ಭರತ್ ಎಂಬುವರಿಗೆ ಇದೇ ತಂತ್ರಜ್ಞಾನ ಬಳಸಿ ಹೆಚ್ಚುವರಿ ವೆಚ್ಚವಿಲ್ಲದೇ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಇದೇ ರೀತಿ ಬೆಂಗಳೂರಿನ ಚಿಕ್ಕಬಾಣಾವರದ 24 ವರ್ಷ ಚಾಲಕರೊಬ್ಬರಿಗೆ ಅತ್ಯಂತ ಕ್ಲಿಷ್ಟಕರವಾದ ಹೃದಯದ ಕವಾಟ ವಾಲ್ವ್ ಬದಲಾವಣೆ ಮಾಡಲಾಗಿದೆ. ಇವರು ಸಹ ಇದೀಗ ಸಹಜ ಬದುಕು ಸಾಗಿಸುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಸಪ್ತಗಿರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದ್ದು, ಇದೀಗ ಸರ್ಕಾರಿ ಯೋಜನೆಗಳಿಗೂ ತನ್ನ ಸೇವೆಯನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಡಾ.ತಮೀಪ್ ಅಹಮದ್ ತಿಳಿಸಿದ್ದಾರೆ.