ಬೆಂಗಳೂರು, ಜು.29- ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿಶ್ವಾಸಮತಯಾಚನೆ ಸಾಬೀತು ಪಡಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರು ಕಡ್ಡಾಯವಾಗಿ ಸದನಕ್ಕೆ ಹಾಜರಾಗಬೇಕೆಂದು ವಿಪ್ ಜಾರಿ ಮಾಡಲಾಗಿದೆ.
ಬಿಜೆಪಿಯ ಮುಖ್ಯ ಸಚೇತಕ ವಿ.ಸುನೀಲ್ಕುಮಾರ್ ಎಲ್ಲಾ ಶಾಸಕರಿಗೂ ಸದನಕ್ಕೆ ಕಡ್ಡಾಯವಾಗಿ ಹಾಜರಿರಬೇಕೆಂದು ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ವಿಪ್ ಜಾರಿ ಮಾಡಿದ್ದಾರೆ.
ತಡರಾತ್ರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಉಸ್ತುವಾರಿ ವಿ.ಮುರಳೀಧರರಾವ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮುಖಂಡರಾದ ಕೆ.ಎಸ್.ಈಶ್ವರಪ್ಪ ಸೇರಿದಂತೆ ಮತ್ತಿತರ ಜತೆ ಚರ್ಚೆ ಮಾಡಿದ ಬಳಿಕ 105 ಶಾಸಕರಿಗೂ ವಿಪ್ ಜಾರಿಮಾಡಲು ತೀರ್ಮಾನಿಸಲಾಯಿತು.
ಶಾಸಕರ ಬಗ್ಗೆ ಯಾವುದೇ ರೀತಿಯ ಸಣ್ಣದೊಂದು ಅನುಮಾನ ಇಲ್ಲದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಸಮಸ್ಯೆ ಉಂಟಾಗದಂತೆ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ವಿಪ್ ಜಾರಿ ಮಾಡಲಾಗಿದೆ.
ಶಾಸಕಾಂಗ ಸಭೆ ಮುಗಿದ ತಕ್ಷಣ ಶಾಸಕರೆಲ್ಲರೂ ಕಳೆದ ರಾತ್ರಿ ಖಾಸಗಿ ಹೋಟೆಲ್ನಲ್ಲೇ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ ಹೋಟೆಲ್ನಲ್ಲಿ ತಿಂಡಿ ತಿಂದು ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದರು.