ನ್ಯಾಯಾಲಯದಲ್ಲಿ ಅನರ್ಹಗೊಂಡ ಎಲ್ಲರಿಗೂ ಜಯ ಸಿಕ್ಕೇಸಿಗುತ್ತದೆ-ಬಿಜೆಪಿ ಮುಖಂಡ ಮುರುಳೀಧರರಾವ್

ಬೆಂಗಳೂರು, ಜು.29- ಕಾಂಗ್ರೆಸ್ ಹಾಗೂ ಜೆಡಿಎಸ್ ಭಿನ್ನಮತೀಯ ಶಾಸಕರನ್ನು ವಿಧಾನಸಭೆಯ ಸ್ಪೀಕರ್ ಸದಸ್ಯತ್ವದಿಂದ ಅನರ್ಹಗೊಳಿಸಿದ್ದರೂ ನ್ಯಾಯಾಲಯದಲ್ಲಿ ಅವರಿಗೆ ನ್ಯಾಯ ಸಿಗಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಸ್ವಯಂ ಪ್ರೇರಿತರಾಗಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದಾಗ ಸ್ಪೀಕರ್ ಅದನ್ನು ಅಂಗೀಕರಿಸಬೇಕಿತ್ತು. ಆದರೆ, ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಪಕ್ಷಪಾತದಿಂದ ಕೂಡಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ನ್ಯಾಯಾಲಯದಲ್ಲಿ ಅನರ್ಹಗೊಂಡ ಎಲ್ಲರಿಗೂ ಜಯ ಸಿಕ್ಕೇಸಿಗುತ್ತದೆ ಎಂದು ಹೇಳಿದರು.

ಯಾವ ಕಾರಣಕ್ಕಾಗಿ ಅವರನ್ನು ಅನರ್ಹ ಮಾಡಲಾಗಿದೆ ಎಂದು ಸ್ಪೀಕರ್ ಸ್ಪಷ್ಟವಾಗಿ ತಿಳಿಸಿಲ್ಲ. ಕೇವಲ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ದೂರನ್ನೇ ಆಧಾರವಾಗಿಟ್ಟುಕೊಂಡು ಅನರ್ಹ ಮಾಡಲಾಗಿದೆ. ಸ್ಪೀಕರ್ ನೀಡಿರುವ ನೋಟಿಸ್‍ಗೆ ನಾಲ್ಕು ವಾರಗಳ ಕಾಲ ಕಾಲಾವಕಾಶ ಕೇಳಿದ್ದರೂ ಸ್ಪೀಕರ್ ಏಕೆ ಸಮಯ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.

ಸುಪ್ರೀಂಕೋರ್ಟ್ ಶಾಸಕರ ರಾಜೀನಾಮೆಯನ್ನು ಇತ್ಯರ್ಥಪಡಿಸಬೇಕೆಂದು ಸ್ಪೀಕರ್‍ಗೆ ನಿರ್ದೇಶನ ನೀಡಿತ್ತು. ಆದರೆ, ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಶಾಸಕರನ್ನು ಅನರ್ಹಗೊಳಿಸಿರುವುದು ನ್ಯಾಯಾಂಗ ನಿಂದನೆಯ ಸ್ಪಷ್ಟ ನಿದರ್ಶನವಾಗಿದೆ. ಅನರ್ಹಗೊಂಡವರೆಲ್ಲರೂ ನ್ಯಾಯಾಲಯದಲ್ಲಿ ಸ್ಪೀಕರ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿದ್ದರಾಗಿದ್ದಾರೆ ಎಂದರು.

ರಾಜ್ಯದಲ್ಲಿ ಈ ಬಾರಿ ನಮ್ಮ ಪಕ್ಷ ಜನ ಪರವಾದ ಆಡಳಿತ ನೀಡುತ್ತದೆ. ಯಾವುದೇ ರೀತಿಯ ಭಿನ್ನಮತಕ್ಕಾಗಲಿ, ಅಸಮಾಧಾನವಿಲ್ಲದಂತೆ ಆಡಳಿತವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನೀಡಲಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡುವುದು ಉದ್ದೇಶವೆಂದರು.

ಸಚಿವ ಸಂಪುಟ ವಿಸ್ತರಣೆಯನ್ನು ಕೇಂದ್ರ ವರಿಷ್ಟರೊಂದಿಗೆ ಚರ್ಚಿಸಿ ಯಾವಾಗ ವಿಸ್ತರಣೆ ಮಾಡಬೇಕೆಂಬುದನ್ನು ಯಡಿಯೂರಪ್ಪನವರು ತೀರ್ಮಾನಿಸುತ್ತಾರೆ.

ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದರೂ ಪಕ್ಷದ ಹಿತದೃಷ್ಟಿಯಿಂದ ಕೆಲವರು ತ್ಯಾಗ ಮಾಡಲೇಬೇಕು. ಈ ವಿಷಯದಲ್ಲಿ ಯಾವುದೇ ರೀತಿಯ ಸಣ್ಣ ಗೊಂದಲವೂ ಇಲ್ಲ ಎಂದು ಮುರಳೀಧರರಾವ್ ಸ್ಪಷ್ಟಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ