ಬೆಂಗಳೂರು; ಬಿಜೆಪಿ ಸರ್ಕಾರ ಜನರ ಆದೇಶದಿಂದ ರಚನೆಯಾದ ಸರ್ಕಾರವಲ್ಲ ಹಾಗೂ ಒಮ್ಮೆಯೂ ಇವರಿಗೆ ಜನಾದೇಶ ಸಿಕ್ಕಿಲ್ಲ. ಹೀಗಾಗಿ ಇದು ಸಂವಿಧಾನ ವಿರೋಧಿ ಸರ್ಕಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬಿಜೆಪಿ ಹಿರಿಯ ನಾಯಕ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಆರಂಭವಾದ ವಿಧಾನಮಂಡಲ ಅಧಿವೇಶನದಲ್ಲಿ ವಿಶ್ವಾಸಮತ ನಿರ್ಣಯವನ್ನು ಮಂಡಿಸಿದ್ದರು. ಇದರ ಮೇಲಿನ ಚರ್ಚೆ ವೇಳೆ ಮಾತನಾಡಿದ ಸಿದ್ದರಾಮಯ್ಯ, “ಕಳೆದ ಕೆಲ ದಿನಗಳಿಂದ ಯಡಿಯೂರಪ್ಪ ಇದು ಜನರ ಆಸೆಯಂತೆ ಅವರ ಆದೇಶದಂತೆ ಅವರ ಆಶೋತ್ತರಗಳ ಈಡೇರಿಕೆಗಳಿಗಾಗಿ ರಚನೆಯಾದ ಸರ್ಕಾರ ಎನ್ನುತ್ತಿದ್ದಾರೆ.
ಆದರೆ, ಅವರಿಗೆ ನೆನಪಿರಲಿ ಈಗ ರಚನೆಯಾಗಿರುವುದು ಜನಾದೇಶದ ಸರ್ಕಾರವಲ್ಲ ಹಾಗೂ ಒಮ್ಮೆಯೂ ಅವರಿಗೆ ಜನಾದೇಶ ಸಿಕ್ಕಿಲ್ಲ. 2008, 2018 ಎರಡೂ ಅವಧಿಯಲ್ಲೂ ಅವರಿಗೆ ಜನಾದೇಶ ಸಿಕ್ಕಿಲ್ಲ. ಇನ್ನೂ 2019ರಲ್ಲೂ ಜನಾದೇಶ ಇಲ್ಲದೆ ಇದೀಗ ಸರ್ಕಾರ ರಚಿಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೈತಿಕತೆ ಇರುವವರು ಹೀಗೆ ಮಾಡಲ್ಲ” ಎಂದು ಅವರು ಕಿಡಿಕಾರಿದ್ದಾರೆ.
ಇಂದು ಅಧಿವೇಶನದಲ್ಲಿ ನಡೆಯುತ್ತಿರುವ ವಿಶ್ವಾಸಮತವನ್ನು ನಾನು ವಿರೋಧಿಸುತ್ತೇನೆ ಎಂದಿರುವ ಅವರು, “ಕಳೆದ ಶುಕ್ರವಾರ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಅವರು ಮುಖ್ಯಮಂತ್ರಿಯಾಗುವಾಗ ಬಹುಮತಕ್ಕೆ 112 ಮ್ಯಾಜಿಕ್ ನಂಬರ್ ಇರಬೇಕಿತ್ತು. ಆದರೆ, ಈ ನಂಬರ್ ಇಲ್ಲದಿದ್ದರೂ ಅವರು ಹೇಗೆ ಪ್ರಮಾಣ ವಚನ ಸ್ವೀಕರಿಸಿದರು. ಇದು ಸ್ಪಷ್ಟ ಪ್ರಜಾಪ್ರಭುತ್ವ ವಿರೋಧಿ ನಡೆ. ಸಂವಿಧಾನದ ಮೇಲೆ ಗೌರವ ಇರುವವರು ಹೀಗೆ ಮಾಡಲು ಸಾಧ್ಯವಿಲ್ಲ.
15ನೇ ವಿಧಾನಸಭೆಯ ಪೂರ್ಣ ಅವಧಿಗೆ ಯಡಿಯೂರಪ್ಪ ಸಿಎಂ ಆಗಿರಬೇಕು ಎಂಬ ಆಸೆ ನಮಗೂ ಇದೆ. ಆದರೆ, ಇರ್ತಾರೆ ಅನ್ನೋ ಗ್ಯಾರಂಟಿ ಇಲ್ಲ. ಈ ಅತೃಪ್ತರನ್ನು ಕಟ್ಟಿಕೊಂಡು ಇವರಿಂದ ಸ್ಥಿರ ಸರ್ಕಾರ ಕೊಡೋಕೆ ಸಾಧ್ಯವಿಲ್ಲ. ಅದನ್ನು ಒಪ್ಪಿಕೊಳ್ಳಲು ಜನರೂ ಸಿದ್ದರಿಲ್ಲ” ಎಂದು ಅವರು ಕಿಡಿಕಾರಿದ್ದಾರೆ.
ಮೈತ್ರಿ ಸರ್ಕಾರ ನಿಷ್ಕ್ರಿಯವಾಗಿರಲಿಲ್ಲ:
ಇದೇ ಸಂದರ್ಭದಲ್ಲಿ 14 ತಿಂಗಳ ಮೈತ್ರಿ ಸರ್ಕಾರ ನಷ್ಕ್ರಿಯವಾಗಿರಲಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, “ಬಿಜೆಪಿ ನಾಯಕರು ಹೋದಲ್ಲಿ ಬಂದಲ್ಲೆಲ್ಲಾ ಮೈತ್ರಿ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಬಿಂಬಿಸುತ್ತಲೇ ಬಂದಿದ್ದರು. ಆದರೆ, ಈ ಸರ್ಕಾರ ಕನಿಷ್ಟ ಯೋಜನೆಗಳನ್ನು ರೂಪಿಸಿ ಉತ್ತಮ ಆಡಳಿತ ನೀಡುತ್ತಿತ್ತು. ಸರ್ಕಾರ ಹಾಗೂ ಖಾಸಗಿ ಸಾಲಮನ್ನಾದಂತಹ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದೆ.
ಮೊನ್ನೆ ಸಣ್ಣ ರೈತರಿಗೆ 4 ಸಾವಿರ ಧನ ಸಹಾಯ ಮಾಡುವ ಹಾಗೂ ನೇಕಾರರ ಸಾಲಮನ್ನಾ ಮಾಡುವ ಯೋಜನೆಯನ್ನು ಯಡಿಯೂರಪ್ಪ ಘೋಷಿಸಿದ್ದರು.
ಆದರೆ, ಈ ಯೋಜನೆ ಈ ಹಿಂದಿನ ಕಾಂಗ್ರೆಸ್ ಸರ್ಕಾರ ರೂಪಿಸಿತ್ತು. ಈ ಅವಧಿಯಲ್ಲಿ ಯೋಜನೆ ಜಾರಿಯಾಗಬೇಕಿತ್ತು. ಆದರೆ, ಅಷ್ಟೊತ್ತಿಗೆ ಸರ್ಕಾರ ಉರುಳಿದೆ.
ಹೀಗಾಗಿ ಯಡಿಯೂರಪ್ಪನವರ ಈ ಯೋಜನೆ ನಮ್ಮ ಸರ್ಕಾರದ ಯೋಜನೆಯ ಪುನರುಚ್ಚರಣೆ ಅಷ್ಟೆ” ಎಂದು ಮಾಹಿತಿ ನೀಡಿದರು.