ಬೆಂಗಳೂರು, ಜು.29-ಇಂದು ನಡೆಯಬೇಕಾಗಿದ್ದ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ(ಕೆಎಂಎಫ್)ದ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ರಾಜ್ಯ ಸರ್ಕಾರ ಕೊನೇ ಕ್ಷಣದಲ್ಲಿ ಮುಂದೂಡಿದೆ.
ಇದರಿಂದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ಭಾರೀ ನಿರಾಸೆಯಾಗಿದೆ. ಅತ್ಯಂತ ಪ್ರತಿಷ್ಠಿತ ಹುದ್ದೆಯಾಗಿರುವ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಪಡೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ನಲ್ಲಿ ಪೈಪೋಟಿ ಆರಂಭವಾಗಿದೆ.
ಕಾಂಗ್ರೆಸ್ನಿಂದ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಹಾಗೂ ಜೆಡಿಎಸ್ನಿಂದ ಎಚ್.ಡಿ.ರೇವಣ್ಣ ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಹೀಗಾಗಿ ಶನಿವಾರ ರಾತ್ರಿ ಕಾಂಗ್ರೆಸ್ನ ನಾಲ್ವರು ಅಧ್ಯಕ್ಷರನ್ನು ಹೈದರಾಬಾದ್ನ ರೆಸಾರ್ಟ್ಗೆ ಕರೆದೊಯ್ದಿದ್ದರು ಎನ್ನಲಾಗಿದೆ.
ಇತ್ತ ಕಾಂಗ್ರೆಸ್ ರೇವಣ್ಣನವರ ಈ ಬೆಳವಣಿಗೆಯಿಂದ ಬೇಸತ್ತು ಚುನಾವಣೆ ಮುಂದೂಡುವಂತೆ ಸರ್ಕಾರದ ಮೇಲೆ ತೆರೆಮರೆಯಲ್ಲಿ ಒತ್ತಡ ಹಾಕಿತ್ತು. ಕಾಂಗ್ರೆಸ್ನ ಪ್ರಮುಖರೊಬ್ಬರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಚುನಾವಣೆ ಮುಂದೂಡುವಂತೆ ಮನವಿ ಮಾಡಿದ್ದರು.
ಬೆಳಗ್ಗೆ ಕೆಎಂಎಫ್ ಚುನಾವಣೆಯನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡುವಂತೆ ಯಡಿಯೂರಪ್ಪ ರಾಜ್ಯಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ಭಾಸ್ಕರ್ಗೆ ಸೂಚನೆ ಕೊಟ್ಟರು.
ಮುಖ್ಯಮಂತ್ರಿಗಳ ಸೂಚನೆಯಂತೆ ಇಂದು ನಡೆಯಬೇಕಾಗಿದ್ದ ಚುನಾವಣೆಯನ್ನು ಮುಂದೂಡಲಾಯಿತು.
ಕೆಎಂಎಫ್ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಒಂದೂವರೆ ವರ್ಷಗಳ ಕಾಲ ಅಧ್ಯಕ್ಷರಾಗಿ ಅನುಭವ ಹೊಂದಿರುವ ರೇವಣ್ಣ ತಮಗೇ ಈ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಆದರೆ ಹೆಚ್ಚು ಸ್ಥಾನ ಹೊಂದಿರುವ ತಮಗೆ ಅಧ್ಯಕ್ಷ ಸ್ಥಾನ ಸಿಗ ಬೇಕೆಂಬು ಕಾಂಗ್ರೆಸ್ ವಾದ. ವಾರ್ಷಿಕವಾಗಿ 15 ಸಾವಿರ ಕೋಟಿ ವಹಿವಾಟು ಹೊಂದಿರುವ ಕೆಎಂಎಫ್ನಲ್ಲಿ ಅಧ್ಯಕ್ಷ ಸ್ಥಾನ ಪಡೆಯುವುದು ಯಾರಿಗೇ ಆಗಲಿ ಪ್ರತಿಷ್ಠೆಯೇ ಸರಿ.