ಸದನದಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ಪೀಕರ್ ರಮೇಶ್‍ಕುಮಾರ್

ಬೆಂಗಳೂರು, ಜು.29-ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಸದನದಲ್ಲೇ ತಮ್ಮ ಸ್ಥಾನದ ರಾಜೀನಾಮೆ ನೀಡಿದರು.

ಉಪ ಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರಿಗೆ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪತ್ರ ನೀಡಿ ನಿರ್ಗಮಿಸಿದರು.

ಸಾಂವಿಧಾನಕ್ಕೆ ನಿಷ್ಠವಾಗಿ, ಆತ್ಮಸಾಕ್ಷಿಗನುಗುಣವಾಗಿ ಶಕ್ತಿ ಮೀರಿ ಸಭಾಧ್ಯಕ್ಷರ ಕರ್ತವ್ಯವನ್ನು ನಿರ್ವಹಿಸಿರುವುದಾಗಿ ಅವರು ಇದಕ್ಕೂ ಮುನ್ನ ಸದನದಲ್ಲಿ ತಿಳಿಸಿದರು.

ಸಭಾಧ್ಯಕ್ಷರ ಸ್ಥಾನ ದೊಡ್ಡದು.ನಾವು ಸಣ್ಣವರು. ಜಾಗೃತಿಯಿಂದ ಸಭಾಧ್ಯಕ್ಷರ ಸ್ಥಾನಕ್ಕೆ ಅಪಚಾರವಾಗದಂತೆ ಕೆಲಸ ಮಾಡಬೇಕಾಗಿದೆ.ಸಭಾಧ್ಯಕ್ಷರ ಸ್ಥಾನದ ಘನತೆ, ಗೌರವಕ್ಕೆ ಧಕ್ಕೆಯಾಗದಂತೆ ಜವಾಬ್ದಾರಿ ನಿರ್ವಹಿಸಿರುವುದಾಗಿ ತಿಳಿಸಿದರು.

ಸಣ್ಣಪುಟ್ಟ ಘಟನೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಸಭಾಧ್ಯಕ್ಷರ ಜವಾಬ್ದಾರಿಯಿಂದ ಬಿಡುಗಡೆ ಹೊಂದಬೇಕೆಂದು ನಿರ್ಧರಿಸಿದ್ದೇನೆ. ನಮ್ಮ ಕುಟುಂಬ ನಿರೀಕ್ಷಿಸಿದ್ದೇ ಬೇರೆ, ತಾವು ಆಗಿದ್ದೇ ಬೇರೆ.

ತಾವು ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಆಗಿನ ಮುಖ್ಯಮಂತ್ರಿ ದೇವರಾಜ ಅರಸುರವರಿಂದ ಪ್ರೇರಿತರಾಗಿ ರಾಜಕೀಯ ಪ್ರವೇಶ ಮಾಡಿದ್ದಾಗಿ ಹೇಳಿದ ಅವರು, ಈ ಕ್ಷಣವೇ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಪ್ರಕಟಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೂಲಕ ರಾಜ್ಯಕ್ಕೆ ಒಳ್ಳೆಯದಾಗಲಿ. ಬಡವರಿಗೆ, ಅಸಹಾಯಕರಿಗೆ ಧ್ವನಿ ಇಲ್ಲದವರಿಗೆ ಒಳ್ಳೆಯದಾಗಲಿ ಎಂದು ಆಶಿಸಿದರು.

14 ತಿಂಗಳು, 4 ದಿನ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಸಹಕರಿಸಿದ ಮುಖ್ಯಮಂತ್ರಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು, ಸಚಿವಾಲಯದ ಸಿಬ್ಬಂದಿ, ಮಾದ್ಯಮದವರಿಗೆ ವಂದನೆಗಳನ್ನು ತಿಳಿಸಿದರು.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ಸೋನಿಯಾಗಾಂಧಿ, ರಾಹುಲ್‍ಗಾಂಧಿ ಹಾಗೂ ವೇಣುಗೋಪಾಲ್ ಅವರು ತಮ್ಮ ಮೇಲೆ ವಿಶ್ವಾಸವಿಟ್ಟು ಸಭಾಧ್ಯಕ್ಷರಾಗಲು ಸಲಹೆ ಮಾಡಿದ್ದರು.ತಮ್ಮ ಅಭಿಪ್ರಾಯವನ್ನು ವೇಣುಗೋಪಾಲ್ ಕೋರಿದ್ದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮನವಿಗೆ ಸ್ಪಂದಿಸಿ ಸಭಾಧ್ಯಕ್ಷರಾಗಲು ಒಪ್ಪಿದೆ. ಸಭಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು, ದೂರವಾಣಿ ಕರೆ ಮಾಡಿ ಸುರೇಶ್‍ಕುಮಾರ್ ಅವರನ್ನು ಸಭಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ತೀರ್ಮಾನಿಸಲಾಗಿತ್ತು. ಆದರೆ ನಿಮ್ಮನ್ನು ಸರ್ವಾನುಮತದಿಂದ ಆಯ್ಕೆ ಮಾಡಲು ಸಹಕರಿಸುತ್ತೇವೆ ಎಂದಿದ್ದರು. ಅವರ ಸೌಜನ್ಯಕ್ಕೂ ಋಣಿಯಾಗಿರುವುದಾಗಿ ಹೇಳಿದರು.

ಸಾರ್ವಜನಿಕ ಜೀವನದ ವೈಯಕ್ತಿಕ ವಿಚಾರವನ್ನು ರೋಚಕ ಮಾಡಿ ಅವರ ಕುಟುಂಬ ಮತ್ತು ಸಂಬಂಧಿಕರಿಗೆ ನೋವುಂಟು ಮಾಡಬೇಡಿ ಎಂದು ಮಾಧ್ಯಮಗಳಿಗೆ ಸಲಹೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ