ಬೆಂಗಳೂರು, ಜು.29-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಮಂಡಿಸಿದ ವಿಶ್ವಾಸ ಮತಯಾಚನಾ ನಿರ್ಣಯಕ್ಕೆ ಧ್ವನಿಮತದ ಅಂಗೀಕಾರ ದೊರೆಯಿತು.
ವಿಶ್ವಾಸ ಮತಯಾಚನಾ ಪ್ರಸ್ತಾವವನ್ನು ಅಂಗೀಕರಿಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದರು. ಆಗ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ಮುಖ್ಯಮಂತ್ರಿ ಮಂಡಿಸಿದ ವಿಶ್ವಾಸಮತ ಯಾಚನಾ ಪ್ರಸ್ತಾವವನ್ನು ಮತಕ್ಕೆ ಹಾಕಿದಾಗ ಸದನದಲ್ಲಿ ಧ್ವನಿ ಮತದ ಅಂಗೀಕಾರ ದೊರೆಯಿತು.
ಸಭಾಧ್ಯಕ್ಷರು ಇಷ್ಟೇ ಸಾಕಾ, ಈ ವಿಚಾರದಲ್ಲಿ ಮುಂದುವರೆಯ ಬಹುದೇ ಎಂದಾಗ ಯಾರೊಬ್ಬರೂ ಮತ ವಿಭಜನೆಗೆ ಆಗ್ರಹಿಸಲಿಲ್ಲ.
ಆಗ ಮುಖ್ಯಮಂತ್ರಿಯವರು ಮಂಡಿಸಿದ ಪ್ರಸ್ತಾವಕ್ಕೆ ಅಂಗೀಕಾರ ದೊರೆತಿದೆ ಎಂದಾಗ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.
ವಿಶ್ವಾಸ ಮತಯಾಚನಾ ಪ್ರಸ್ತಾವದ ಮೇಲೆ ನಡೆದ ಚರ್ಚೆ ನಂತರ ಉತ್ತರ ರೂಪದಲ್ಲಿ ಮಾತನಾಡಿದ ಮುಖ್ಯಮಂತ್ರಿ, ರಾಜ್ಯದ ಆರೂವರೆ ಕೋಟಿ ಜನರು ಮೆಚ್ಚುವಂತಹ ಆಡಳಿತ ನೀಡುವುದಾಗಿ ಭರವಸೆ ನೀಡಿದರು.
ಮುಂದಿನ 3 ವರ್ಷ 10 ತಿಂಗಳು ಆಡಳಿತ ನಡೆಸುವ ಅವಕಾಶ ದೊರೆತಿದೆ. ನಾಡಿನ ಕಲ್ಯಾಣಕ್ಕೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ನಿಮಗೊಂದು ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ಅಥವಾ ನಾಡಿಗೆ ಧಕ್ಕೆ ತರುವಂತಹ ಕೆಲಸ ಆಗುತ್ತಿದೆ ಎಂದು ಅನಿಸಿದರೆ ನೀವು ದೂರವಾಣಿ ಕರೆ ಮಾಡಿ ಕೇಳಬಹುದು ಎಂದರು.
ತಾವು ಹೋರಾಟದ ಹಿನ್ನೆಲೆಯಲ್ಲಿ ಮಾಡಿರುವ ಸಾಧನೆ ಮಾತನಾಡಬೇಕೇ ಹೊರತು ಮಾತೇ ಸಾಧನೆಯಾಗಬಾರದು ಎಂದು ಹೇಳಿ ತಾವು ತಂದಿರುವ ಪ್ರಸ್ತಾವಕ್ಕೆ ಅಂಗೀಕಾರ ನೀಡಬೇಕೆಂದು ಮನವಿ ಮಾಡಿದರು.
ಬಿಜೆಪಿಯ ಎಲ್ಲಾ ಶಾಸಕರು, ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಬಹುತೇಕ ಶಾಸಕರೂ ಕೂಡ ಹಾಜರಿದ್ದರು. ವಿಶ್ವಾಸ ಮತದ ಪರವಾಗಿ ಮತ ಚಲಾಯಿಸುವಂತೆ ಬಿಜೆಪಿ ತಮ್ಮ ಎಲ್ಲಾ ಶಾಸಕರಿಗೂ ವಿಪ್ ನೀಡಿತ್ತು.
ಇಂದು ಬೆಳಗ್ಗೆ ವಂದೇ ಮಾತರಂ ಗೀತೆಯೊಂದಿಗೆ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಮಾಡಿಕೊಟ್ಟರು.
ಆಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಸದನವು ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ ಎಂದು ಮಂಡಿಸಿದರು.
ಆಗ ಸಭಾಧ್ಯಕ್ಷರು ಸರ್ಕಾರ ಬಂದು ಎರಡು ದಿನ ಆಗಿದೆ. ಚರ್ಚೆ ಬೇಕಾ ಎಂದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ ಅವರು ಬೇಡ ಎಂದರೆ ಬೇಡ ಎಂದು ಹೇಳಿದರು.
ಆಗ ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಮಂಡನೆ ಸಂದರ್ಭದಲ್ಲಿ ನಾಡಿನ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಗೆ ನಮಿಸಿ ಬಸವಾಧಿ ಶರಣರು, ರಾಷ್ಟ್ರಪಿತ ಮಹಾತ್ಮಗಾಂಧಿ, ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರಿಗೆ ವಂದಿಸುತ್ತೇನೆ. ನಾಡಿನ ಜನರ ಆಶಯದಂತೆ ಮತ್ತೊಮ್ಮೆ ತಾವು ಮುಖ್ಯಮಂತ್ರಿಯಾಗಲು ದೊರೆತ ಅವಕಾಶ ನಾಡಿನ ಜನರಿಗೆ ತಂದ ಗೌರವವಾಗಿದೆ. ತಾವು ಮುಖ್ಯಮಂತ್ರಿಯಾಗಲು ಹಲವು ಕಾರಣಗಳಿದ್ದರೂ ಅದನ್ನು ಈ ಸಂದರ್ಭದಲ್ಲಿ ವಿಶ್ಲೇಷಿಸುವುದಿಲ್ಲ ಎಂದರು.
ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸೇಡಿನ ರಾಜಕಾರಣ ಮಾಡಿಲ್ಲ. ವೈಯಕ್ತಿಕವಾಗಿಯೂ ಆ ಇಬ್ಬರು ಸೇಡಿನ ರಾಜಕಾಣರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ವಿರೋಧ ಪಕ್ಷವಾಗಿ ಸರ್ಕಾರವನ್ನು ಟೀಕೆ ಟಿಪ್ಪಣಿ ಮಾಡುವುದು ಸಹಜ. ಮುಂದಿನ ನಾಲ್ಕೈದು ತಿಂಗಳಲ್ಲಿ ಸರ್ಕಾರ ಜನಪರವಾಗಿ ಅಭಿವೃದ್ಧಿಯ ಗುರಿಯೊಂದಿಗೆ ಆಡಳಿತ ನಡೆಸಲಿದೆ. ಪ್ರಸ್ತುತ ಆಡಳಿತ ಯಂತ್ರ ಕುಸಿದಿದ್ದು, ಇದನ್ನು ಸರಿದಾರಿಗೆ ತರುವುದು ನಮ್ಮ ಮೊದಲ ಆದ್ಯತೆ. ತಾವು ಕೂಡ ದ್ವೇಷದ ರಾಜಕಾರಣ ಮಾಡುವುದಿಲ್ಲ. ಪರ್‍ಗೆಟ್ ಫರ್ ಗೀವ್‍ನಲ್ಲಿ ನಂಬಿಕೆ ಇದೆ ಎಂದರು.
ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಅಮಿತ್‍ಶಾ, ಜೆ.ಪಿ.ನಡ್ಡಾ ಅವರಿಗೆ ಅಭಿನಂದಿಸುವುದಾಗಿ ಹೇಳಿದಾಗ. ಆಡಳಿತ ಪಕ್ಷದ ಶಾಸಕರು ಮೇಜುಕುಟ್ಟಿ ಸ್ವಾಗತಿಸಿದರು.
ರಾಜ್ಯವೇ ಸಂದಿಗ್ಧ ಪರಿಸ್ಥಿತಿಯಲ್ಲಿದೆ ಜುಲೈ 31 ಕಳೆದರೆ ಸರ್ಕಾರದ ಹಣ ಖರ್ಚು ಮಾಡಲಾಗುವುದಿಲ್ಲ. ಹೀಗಾಗಿ ರಾಜ್ಯಪಾಲರು ಅತಿ ದೊಡ್ಡ ಪಕ್ಷವಾದ ಬಿಜೆಪಿಗೆ ಆಹ್ವಾನ ನೀಡಿದರು.ಕಳೆದ ಶುಕ್ರವಾರ ತಾವು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವುದಾಗಿ ತಿಳಿಸಿದರು.
ರಾಜ್ಯದ 82 ತಾಲ್ಲೂಕುಗಳಲ್ಲಿ ಮಳೆ ಕೊರತೆ ಎದುರಾಗಿದ್ದು, ಭೀಕರ ಬರಗಾಲವಿದೆ. ನಾವು ನೀವು ಎಲ್ಲರೂ ಸೇರಿ ಸಮಸ್ಯೆ ಬಗೆಹರಿಸೋಣ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕಂತಿನಲ್ಲಿ ರೈತರಿಗೆ ಆರುಸಾವಿರ ನೆರವು ನೀಡುವ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ. ನಾವೂ ಕೂಡ ರಾಜ್ಯದಿಂದ ಎರಡು ಕಂತಿನಲ್ಲಿ ನಾಲ್ಕು ಸಾವಿರ ರೂ. ನೀಡಲು ತೀರ್ಮಾನ ಮಾಡಿದ್ದೇವೆ. ಅದೇ ರೀತಿ ನೂರು ಕೋಟಿ ನೇಕಾರರ ಸಾಲ ಮನ್ನಾ ಮಾಡಲು ತೀರ್ಮಾನಿಸಲಾಗಿದೆ ಎಂದರು.
ರೈತರು , ನೇಕಾರರು ಎರಡು ಕಣ್ಣಿದ್ದಂತೆ ಎಂದ ಬಿಎಸ್‍ವೈ, ಮತದಾರರು ಮಾಲೀಕರಾಗಿದ್ದು, ಅವರ ಸೇವೆ ಮಾಡಲಾಗುವುದು. ಜನಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿ ಆಡಳಿತ ನಡೆಸಲಿದ್ದು, ಪ್ರತಿಪಕ್ಷದವರ ಸಹಕಾರ ಬಯಸುವುದಾಗಿ ಹೇಳಿದರು.
ತಾವು ಮಂಡಿಸಿರುವ ವಿಶ್ವಾಸಮತ ಯಾಚನೆ ನಿರ್ಣಯಕ್ಕೆ ಸರ್ವಾನುಮತದ ಬೆಂಬಲ ನೀಡಬೇಕೆಂದು ಕೋರಿದರು.
ವಿಶ್ವಾಸ ಮತದ ಯಾಚನಾ ಪ್ರಸ್ತಾವದ ಮೇಲೆ ಚರ್ಚೆ ಮಾಡಲು ಎ.ಟಿ.ರಾಮಸ್ವಾಮಿ , ಕಾಂಗ್ರೆಸ್‍ನ ಎಚ್.ಕೆ.ಪಾಟೀಲ್ ಅವರು ಮುಂದಾದಾಗ ಕ್ಷಮಿಸಿ ಹೈದರಾಬಾದ್‍ಗೆ ಹೋಗಬೇಕಾಗಿದೆ. ನಿಮಗೆ ಅವಕಾಶ ಮಾಡಿಕೊಟ್ಟರೆ ಮತ್ತೊಬ್ಬರು ಕೇಳುತ್ತಾರೆ ಎಂದು ಪ್ರಸ್ತಾವವನ್ನು ಮತಕ್ಕೆ ಹಾಕಲು ಹೇಳಿದರು.