ಬೆಂಗಳೂರು: ಸದನದಲ್ಲಿ ಬಿಎಸ್ ಯಡಿಯೂರಪ್ಪ ವಿಶ್ವಾಸಮತ ಯಾಚಿಸಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಜನಾದೇಶದ ವಿರುದ್ಧವಾಗಿ ಸರ್ಕಾರ ರಚಿಸಿದೆ. ಇದು ಸಂವಿಧಾನ ಬಾಹಿರ ಮತ್ತು ವಾಮಮಾರ್ಗದಿಂದ ಹಿಡಿದ ಅಧಿಕಾರ ಎಂದು ಗುಡುಗಿದರು. ಇದರ ಬೆನ್ನಲ್ಲೇ ಮಾತನಾಡಿದ ನಿರ್ಗಮಿತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ವಜಾಗೊಂಡಿರುವ ಅತೃಪ್ತ ಶಾಸಕರನ್ನು ಅಂತರ್ ಪಿಶಾಚಿಗಳು ಎಂದು ಹೋಲಿಕೆ ಮಾಡಿದರು.
ಸದನದಲ್ಲಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ, “ಅತೃಪ್ತರೋ, ತೃಪ್ತರೋ, ಆ ಶಾಸಕರಿದ್ದಾರಲ್ಲಾ, ಅವರೀಗ ಬೀದಿಗೆ ಬಂದು ನಿಂತಿದ್ದಾರೆ. ಅವರೊಂದು ರೀತಿ ಈಗ ಅಂತರ್ ಪಿಶಾಚಿಗಳಾಗಿದ್ದಾರೆ. ಬಿಜೆಪಿ ಸರ್ಕಾರ ರಚನೆ ಮಾಡಲು ಅವರ ಸಹಾಯ ಬಲು ದೊಡ್ಡದು. ಬಿಜೆಪಿ ಅವರಿಗೆ ಧನ್ಯವಾದ ಅರ್ಪಿಸಬೇಕು,” ಎಂದು ವ್ಯಂಗ್ಯ ಮಾಡಿದರು.
ಮಾತು ಆರಂಭಿಸಿದ ಕುಮಾರಸ್ವಾಮಿ ಮೊದಲು ಬಿಎಸ್ ಯಡಿಯೂರಪ್ಪ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದರು. “ಕಳೆದ ಹದಿನಾಲ್ಕು ತಿಂಗಳಿಂದ ಕರ್ನಾಟಕದಲ್ಲಿ ಆಡಳಿತ ಯಂತ್ರ ಕುಸಿದಿತ್ತು ಎಂದು ಹೇಳಿ ವಿಶ್ವಾಸಮತ ಪ್ರಸ್ತಾವನೆಯನ್ನು ಯಡಿಯೂರಪ್ಪ ಮಾಡಿದ್ದಾರೆ. ಮುಂದಿನ ಸದನದಲ್ಲಿ ಪುರಾವೆ ಸಮೇತ ಆರೋಪಗಳನ್ನು ಸಾಬೀತು ಮಾಡಿ. ಸುಮ್ಮನೆ ಬಾಯಿ ಚಪಲಕ್ಕಾಗಿ ಆರೋಪ ಮಾಡುವ ಅಭ್ಯಾಸ ಬಿಡಿ,” ಎಂದರು.
ಮುಂದುವರೆದ ಅವರು, “ಹದಿನಾಲ್ಕು ತಿಂಗಳುಗಳ ಕಾಲ ಅಧಿಕಾರಾವಧಿಯಲ್ಲಿ ನನ್ನ ಆತ್ಮ ತೃಪ್ತಿಗೆ ತಕ್ಕಂತೆ ಮತ್ತು ಪ್ರಾಮಾಣಿಕವಾಗಿ ಜನತೆಯ ಪರವಾಗಿ ಕೆಲಸ ಮಾಡಿದ್ದೇವೆ. ನಾನು ಇನ್ಯಾರಿಗೋ ಉತ್ತರವನ್ನು ಕೊಡಬೇಕಿಲ್ಲ. ನನ್ನ ಆತ್ಮಕ್ಕೆ ವಂಚನೆ ಮಾಡಿಕೊಳ್ಳದೇ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನಾವೆಲ್ಲರೂ ಒಂದಲ್ಲಾ ಒಂದು ದಿನ ನಾವು ಮಾಡಿದ ಕೆಲಸಕ್ಕೆ ಉತ್ತರ ನೀಡಲೇಬೇಕಾಗುತ್ತದೆ. ಇದನ್ನು ನಾನು ವಿಶ್ವಾಸಮತ ಮಂಡನೆ ಮಾಡುವಾಗಲೂ ಹೇಳಿದ್ದೆ. ನೀವು ಮಾಡಿದ ಕೃತ್ಯಗಳಿಗೆ ನೀವು ಒಂದಲ್ಲಾ ಒಂದು ದಿನ ಉತ್ತರ ಕೊಡಲೇ ಬೇಕಾಗುತ್ತಿದೆ,” ಎಂದು ಬಿಎಸ್ ವೈಗೆ ಉತ್ತರಿಸಿದರು.
“ಕಳೆದ 14 ತಿಂಗಳಿಂದ ತಾವು ಮಾಡಿರುವ ಪದಬಳಕೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ರೈತರ ಸಾಲಮನ್ನಾ ಮಾಡುವ ವಿಚಾರದಲ್ಲಿ ಮೈತ್ರಿ ಸರ್ಕಾರ ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದೆ ಎಂಬುದು ನಿಮಗೇ ತಿಳಿಯುತ್ತದೆ. ರೈತರ ಸಾಲಮನ್ನಾ ಮಾಡಲಿಲ್ಲ, ಟೋಪಿ ಹಾಕಿದರು ಎಂಬ ರೀತಿ ಸುಳ್ಳು ಹೇಳಿಕೊಂಡು ಬಂದಿದ್ದೀರಿ. ಸತ್ಯಾಂಶ ಏನು ಎಂಬುದನ್ನು ಈಗಲಾದರೂ ಜನರ ಮುಂದಿಡಿ,” ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.
ಮುಂದುವರೆದ ಕುಮಾರಸ್ವಾಮಿ, “ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆಗೂ ಮುನ್ನ ಮಂಡಿಸಿದ್ದ ತಾತ್ಕಾಲಿಕ ಬಜೆಟ್ನ್ನೂ ಕೂಡ ಮುಂದುವರೆಸಿ, ಜತೆಗೆ ನಮ್ಮ ಪ್ರಣಾಳಿಕೆಯಲ್ಲಿರುವ ಕಾರ್ಯಕ್ರಮಗಳನ್ನೂ ಜನತೆಗೆ ನೀಡಿದ್ದೀವಿ,” ಎಂದರು.
“ಋಣಮುಕ್ತ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ನಾವು ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದು ನಮಗೆ ಗೊತ್ತು. ಕಡೆಗೂ ನಾವು ರಾಷ್ಟ್ರಪತಿಗಳ ಅಂಕಿತವನ್ನು ಪಡೆದು ರೈತರ ಋಣಮುಕ್ತ ಕಾಯ್ದೆಯನ್ನು ಅಧಿಕಾರದಿಂದ ಇಳಿಯುವ ಮುನ್ನ ಕಡೆಗೂ ಪಡೆದು ಜಾರಿಗೆ ತಂದಿದ್ದೇವೆ. ಈಗ ಬಿಜೆಪಿ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ. ಈ ಕಾಯ್ದೆಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳ ಮುಖಾಂತರ ಸರ್ಕಾರ ಮಾಡಬೇಕು,” ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಶಾಸಕ ಸ್ಥಾನದಿಂದ ವಜಾ ಆಗಿರುವ ಅತೃಪ್ತರ ಶಾಸಕರ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, “ಬಿಜೆಪಿಯವರು ಆ 17 ಜನ ರಾಜೀನಾಮೆ ನೀಡಿದ ಶಾಸಕರಿಗೆ ಧನ್ಯವಾದ ಹೇಳ್ಬೇಕು. ಪಾಪ ಈಗ ಅವರಿಗೆ ಸ್ಪೆಷಲ್ ಫ್ಲೈಟ್ ಕೂಡ ಇಲ್ಲ. ಮುಂಚೆ ಆದರೆ ವಿಶೇಷ ವಿಮಾನದಲ್ಲಿ ತಿರುಗುತ್ತಿದ್ದರು. ಈಗ ಬೀದಿಗೆ ಬಂದು ನಿಂತಿದ್ದಾರೆ. ದಯವಿಟ್ಟು ಇನ್ನಷ್ಟು ಜನರನ್ನು ಬೀದಿಗೆ ತರಬೇಡಿ. ಇಲ್ಲಿಗೆ ನಿಲ್ಲಿಸಿ,” ಎಂದರು.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜನಪರ ಕೆಲಸ ಮಾಡುವುದಾದರೆ ಸಂಪೂರ್ಣ ಬೆಂಬಲವನ್ನು ಜೆಡಿಎಸ್ ಪಕ್ಷ ಕೊಡುತ್ತದೆ ಎಂದ ಕುಮಾರಸ್ವಾಮಿ, ತಪ್ಪು ಕೆಲಸ ಮಾಡಿದರೆ ಸಿಡಿದೇಳುತ್ತೇವೆ ಎಂದರು.
ಕುಮಾರಸ್ವಾಮಿ ಮಾತು ಮುಗಿಸಿದ ಬೆನ್ನಲ್ಲೇ ಸ್ಪೀಕರ್ ರಮೇಶ್ ಕುಮಾರ್ ವಿಶ್ವಾಸಮತವನ್ನು ಧ್ವನಿ ಮತದಾನದ ಮೂಲಕ ಕೇಳಿದರು. ಸದನದ ಸಂಖ್ಯಾಬಲ 207 ಆಗಿರುವುದರಿಂದ, ಬಹುಮತಕ್ಕೆ ಕೇವಲ 104 ಮತಗಳು ಬೇಕಿದ್ದವು. ಬಿಜೆಪಿ ತನ್ನದೇ ಶಾಸಕರ ಬಲ 105 ಹೊಂದಿದ್ದು, ಬಹುಮತ ಸಾಬೀತು ಪಡಿಸಿದೆ.