ಬದಲಾದ ರಾಜಕೀಯ ಪರಿಸ್ಥಿತಿ ಹಿನ್ನಲೆ ಆಡಳಿತ, ಪ್ರತಿಪಕ್ಷದವರ ಕುರ್ಚಿಗಳ ಸ್ಥಾನಪಲ್ಲಟ

ಬೆಂಗಳೂರು: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇಂದು ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದವರ ಕುರ್ಚಿಗಳು ಸ್ಥಾನಪಲ್ಲಟವಾದವು.

ಕಳೆದ 14 ತಿಂಗಳಿನಿಂದ ಆಡಳಿತ ಪಕ್ಷದಲ್ಲಿದ್ದ ಕಾಂಗ್ರೆಸ್- ಜೆಡಿಎಸ್ ಸದಸ್ಯರು  ವಿಶ್ವಾಸಮತಯಾಚನೆ ವೇಳೆ ಪ್ರತಿ ಪಕ್ಷದ ಸ್ಥಾನದಲ್ಲಿ ಕೂರುವಂತಾಯಿತು. ಈವರೆಗೂ ಪ್ರತಿಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ  ಸದಸ್ಯರು ಆಡಳಿತ ಪಕ್ಷದ ಕುರ್ಚಿಯಲ್ಲಿ ಕೂತು ಸಂಭ್ರಮಿಸಿರು..

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತಯಾಚನೆಯಲ್ಲಿ ಸೋಲುಂಟಾದ್ದರಿಂದ ದೋಸ್ತಿ ಸರ್ಕಾರ ಪತನಗೊಂಡಿತ್ತು. ಕೆಲವು ಶಾಸಕರ ರಾಜೀನಾಮೆಯಿಂದಾಗಿ 105 ಹಾಗೂ  ಒಬ್ಬ ಪಕ್ಷೇತರ ಶಾಸಕರ ಬೆಂಬಲ ಪಡೆದಿರುವ ಬಿಜೆಪಿ ಸರ್ಕಾರ ರಚನೆ ಮಾಡಿದೆ.

ನಮುಖ್ಯಮಂತ್ರಿ ಯಡಿಯೂರಪ್ಪನವರು ಆಡಳಿತ ಪಕ್ಷದ  ಸಭಾ ನಾಯಕನ ಸ್ಥಾನದಲ್ಲಿ ಕುಳಿತು ವಿಶ್ವಾಸಮತಯಾಚನೆ ಮಾಡಿದರೆ, ಈವರೆಗೂ ಆಡಳಿತ ಪಕ್ಷದಲ್ಲಿದ್ದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್,  ಮುಖಂಡರಾದ ದಿನೇಶ್‍ಗುಂಡೂರಾವ್, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್‍ಸೇರಿದಂತೆ ಮತ್ತಿತರ ನಾಯಕರು  ವಿರೋಧ ಪಕ್ಷದ ಸಾಲಿನಲ್ಲಿ ಕೂತಿದ್ದರು.

ಹದಿನಾಲ್ಕು ತಿಂಗಳ ಕಾಲ ಪ್ರತಿಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ  ಆಡಳಿತ ಪಕ್ಷದ ಸ್ಥಾನದಲ್ಲಿ ಕೂತಿದ್ದರು. ಅವರೊಂದಿಗೆ ಮುಖಂಡರಾದ ಜಗದೀಶ್‍ಶೆಟ್ಟರ್, ಗೋವಿಂದಕಾರಜೋಳ, ಈಶ್ವರಪ್ಪ, ಶ್ರೀರಾಮುಲು ಸೇರಿದಂತೆ ಮತ್ತಿತರ ನಾಯಕರು ಆಡಳಿತ ಪಕ್ಷದ ಕುರ್ಚಿಯಲ್ಲಿ ಸ್ಥಾನ ಅಲಂಕರಿಸಿದ್ದರು.

ಈ ಹಿಂದೆ 2018ರ ಮೇನಲ್ಲಿ ಯಡಿಯೂರಪ್ಪ ವಿಶ್ವಾಸಮತಯಾಚನೆ ವೇಳೆ ಬಿಜೆಪಿ ಸದಸ್ಯರು ಆಡಳಿತ ಪಕ್ಷದ ಸ್ಥಾನದಲ್ಲಿ ಕೂತಿದ್ದರು. ಅದನ್ನು ಹೊರತುಪಡಿಸಿದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ 5 ವರ್ಷ ಹಾಗೂ ಕುಮಾರಸ್ವಾಮಿ 14 ತಿಂಗಳ ಅವಧಿಯಲ್ಲಿ ಬಿಜೆಪಿಗೆ ಪ್ರತಿಪಕ್ಷದ ಸ್ಥಾನ  ಖಾಯಂಆಗಿತ್ತು. ಈಗ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ಆಡಳಿತ ಪಕ್ಷದಲ್ಲಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಅನಿವಾರ್ಯವಾಗಿ ವಿಪಕ್ಷ ಸ್ಥಾನದಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ