ಬೆಂಗಳೂರು, ಜು.29- ಖಾಸಗಿ ಲೇವಾದೇವಿಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿ ಮಾಡಿರುವ ಋಣಮುಕ್ತ ಕಾಯ್ದೆಗೆ 48ಗಂಟೆಯೊಳಗೆ ಮಾರ್ಗಸೂಚಿಗಳನ್ನು ತಯಾರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಬಹುಮತ ಸಾಬೀತು ಪ್ರಸ್ತಾವನೆ ಮೇಲೆ ಮಾತನಾಡಿದ ಅವರು, ನಾನು ಅಧಿಕಾರದಿಂದ ನಿರ್ಗಮಿಸಿದರೂ ಋಣಮುಕ್ತ ಕಾಯ್ದೆಯನ್ನು ಜಾರಿ ಮಾಡಿದ ಸಂತಸ ನನಗಿದೆ.ರಾಷ್ಟ್ರಪತಿಗಳು ಈ ಕಾಯ್ದೆಗೆ ಅಂಕಿತ ಹಾಕಿದ್ದಾರೆ. 48 ಗಂಟೆಯೊಳಗೆ ಸರ್ಕಾರ ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕು. ಅಧಿಕಾರಿಗಳನ್ನು ಬಳಸಿಕೊಂಡು ಜನತೆಗೆ ಈ ಕಾಯ್ದೆಯಿಂದ ಆಗುವ ಅನುಕೂಲಗಳನ್ನು ಜನತೆಗೆ ಮನವರಿಕೆ ಮಾಡಿಕೊಡಿ ಎಂದು ಸಲಹೆ ಮಾಡಿದರು.
ಮುಖ್ಯಕಾರ್ಯದರ್ಶಿ ಹಾಗೂ ಅವರ ಕೆಳಹಂತದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ.ಸಹಾಯಕ ಆಯುಕ್ತರಿಗೆ ತಕ್ಷಣವೇ ಸೂಚನೆ ಕೊಟ್ಟು ಋಣಮುಕ್ತ ಕಾಯ್ದೆಯಿಂದ ಜನರಿಗೆ ಯಾವ ಯಾವ ಅನುಕೂಲವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿ.ಯಾವುದೇ ಕಾರಣಕ್ಕೂ ಈ ಕಾಯ್ದೆಯನ್ನು ನಿರ್ಲಕ್ಷ್ಯ ಮಾಡಬೇಡಿ.
ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗುತ್ತದೆ.ರಾಜಕಾರಣ ಏನೇ ಇರಲಿ ಅಭಿವೃದ್ಧಿ ವಿಷಯದಲ್ಲಿ ತಾತ್ಸಾರ ಮನೋಭಾವನೆ ಬೇಡ ಎಂದು ಕುಮಾರಸ್ವಾಮಿ ಕಿವಿಮಾತು ಹೇಳಿದರು.
ಹದಿನಾಲ್ಕು ತಿಂಗಳ ಅವಧಿಯಲ್ಲಿ ನಾನು ಉತ್ತಮವಾದ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ. ಅನೇಕ ಅಡೆತಡೆಗಳ ನಡುವೆಯೂ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸಿದ್ದೇನೆ. ಅಧಿಕಾರ ಶಾಶ್ವತವಲ್ಲ ಎಂಬುದು ನನಗೂ ಗೊತ್ತು.ನೀವು ಮಾಡುವ ಒಳ್ಳೆಯ ಕೆಲಸಗಳಿಗೆ ನಾವು ಬೆಂಬಲ ಕೊಡುತ್ತೇವೆ. ನಿಮ್ಮ ಭ್ರಷ್ಟಾಚಾರ, ಅವ್ಯವಹಾರಗಳ ವಿರುದ್ಧ ಹೋರಾಟ ಮಾಡುತ್ತೇವೆ. ನೀವು ಎಷ್ಟರ ಮಟ್ಟಿಗೆ ಆಡಳಿತ ನಡೆಸುತ್ತೀರಿ ಎಂಬುದನ್ನು ನೋಡುತ್ತೇವೆ ಎಂದು ಸೂಕ್ಷ್ಮವಾಗಿ ಹೇಳಿದರು.
ನಮ್ಮದು ಪಾಪದ ಸರ್ಕಾರ ಎಂದು ಅಪಪ್ರಚಾರ ಮಾಡುತ್ತೀರಿ. ಅನೇಕ ಅಡೆತಡೆಗಳ ನಡುವೆಯೇ ರೈತರ ಸಾಲ ಮನ್ನಾ, ಬರಗಾಲ ನಿರ್ವಹಣೆ ಸೇರಿದಂತೆ ಜನರಿಗೆ ಉತ್ತಮವಾದ ಕೆಲಸ ಮಾಡಬೇಕೆಂಬ ಹಂಬಲ ನನಗಿತ್ತು. ಆದರೆ, ನನಗೆ ಅಧಿಕಾರ ಹೋಗಿರುವುದಕ್ಕೆ ದುಃಖವೇನೂ ಇಲ್ಲ. ನೀವು ಮೊದಲು ಆಧಾರ ರಹಿತ ಆರೋಪಗಳನ್ನು ಮಾಡಬೇಡಿ. ಬಾಯಿಚಪಲಕೋಸ್ಕರ ಸುಳ್ಳು ಆರೋಪಗಳನ್ನು ಮಾಡಬೇಡಿ. ನಮ್ಮ ಸರ್ಕಾರದ ಅವಧಿಯಲ್ಲಿ ಆಡಳಿತ ಯಂತ್ರ ಕುಸಿದುಹೋಗಿತ್ತು ಎಂದು ಹೇಳುತ್ತಿದ್ದೀರಿ. ರೈತರ ಸಾಲ ಮನ್ನಾ ಮಾಡಲಿಲ್ಲ ಎಂದು ಯಡಿಯೂರಪ್ಪನವರು ಪದೇ ಪದೇ ಭಾಷಣ ಮಾಡುತ್ತಾರೆ. ನಮ್ಮ ಸರ್ಕಾರ ಯಾವುದರಲ್ಲಿ ಎಡವಿತ್ತು, ಆಡಳಿತ ಯಂತ್ರ ಹೇಗೆ ಕುಸಿದು ಬಿದ್ದಿತ್ತು ಎಂಬುರ ಬಗ್ಗೆ ದಾಖಲೆಗಳನ್ನು ಸದನದಲ್ಲಿ ಇಡಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ನಾನು ಬಿಜೆಪಿಯವರ ಆರೋಪಗಳಿಗೆ ಉತ್ತರ ಕೊಡಬೇಕಾದ ಅಗತ್ಯವಿಲ್ಲ. ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸಿದ್ದೇನೆ. ರೈತರ 45ಸಾವಿರ ಕೋಟಿ ಸಾಲ ಮನ್ನಾ ಮಾಡಿರುವ ಆತ್ಮತೃಪ್ತಿ ನನಗಿದೆ. ನಿಮ್ಮ ಸರ್ಕಾರದ ಅವಧಿಯಲ್ಲಿ ರೈತರ ಎಷ್ಟು ಸಾಲವನ್ನು ಮನ್ನಾ ಮಾಡುತ್ತೀರಿ ಎಂಬುದನ್ನು ನೋಡುತ್ತೇನೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪನವರಿಗೆ ಈಗಲೂ ಜನಾದೇಶ ವಿಲ್ಲ. 2008ರಲ್ಲಿ 110 ಸ್ಥಾನಗಳನ್ನು ಪಡೆದು ಪಕ್ಷೇತರ ಬೆಂಬಲದಿಂದ ಮುಖ್ಯಮಂತ್ರಿಯಾದಿರಿ. ಬಳಿಕ ಸ್ಪೀಕರ್ ಕುರ್ಚಿಯನ್ನು ದುರುಪಯೋಗ ಪಡಿಸಿಕೊಂಡು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದಿರಿ. ಮುಂದೆಯಾದರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ನಡೆಸಿ. ನೀವು ಮಾಡುವ ಒಳ್ಳೆ ಕೆಲಸಗಳಿಗೆ ನಮ್ಮ ಬೆಂಬಲವಿದೆ ಎಂದು ಹೇಳಿದರು.
ಈಗ 17 ಶಾಸಕರಿಂದ ರಾಜೀನಾಮೆ ಕೊಡಿಸಿ ಅವರನ್ನು ಬೀದಿಗೆ ಬೀಳಿಸಿದ್ದೀರಿ. ಅವರು ಅತೃಪ್ತರೋ ಅಥವಾ ಪಿಶಾಚಿಗಳೋ ಎಂಬುದು ಕೆಲವೇ ದಿನಗಳಲ್ಲಿ ನಿಮಗೆ ಗೊತ್ತಾಗುತ್ತದೆ.ಶಾಸಕರಾಗಿದ್ದ ಅವರನ್ನು ಬೀದಿಗೆ ತಳ್ಳಿದ್ದೀರಿ. ಇನ್ನು ಕೆಲವು ಶಾಸಕರ ರಾಜೀನಾಮೆ ಕೊಡಿಸುತ್ತೀರಿ ಎಂಬ ಊಹಾಪೋಹಗಳಿವೆ. ಕಡೆ ಪಕ್ಷ ಈಗಿರುವವರನ್ನಾದರೂ ನೆಮ್ಮದಿಯಾಗಿ ಬಿಡಿ. ಅತೃಪ್ತಗೊಂಡವರ ಪರಿಸ್ಥಿತಿ ಏನಾಗುವುದೆಂಬುದು ನನಗೆ ಗೊತ್ತಿದೆ. ಈಗ ಅವರಿಗೆ ಆಗಿರುವ ಶಿಕ್ಷೆ ಎಲ್ಲರಿಗೂ ಎಚ್ಚರಿಕೆ ಗಂಟೆಯಾಗಿದೆ ಎಂದು ಎಚ್ಚರಿಸಿದರು.
ಸಭಾಧ್ಯಕ್ಷರು ಸಂವಿಧಾನವನ್ನು ರಕ್ಷಣೆ ಮಾಡುವ ವಿಷಯದಲ್ಲಿ ಐತಿಹಾಸಿಕ ತೀರ್ಪನ್ನು ತೆಗೆದುಕೊಂಡಿದ್ದಾರೆ. ಇದಕ್ಕಾಗಿ ನಾನು ಅವರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ. ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡ ಅವರಿಗಾಗಿ ಸರ್ಕಾರ ರಚನೆ ಮಾಡುತ್ತಿಲ್ಲ. ನಿಮ್ಮ ಸ್ವಾರ್ಥಕ್ಕಾಗಿ ಸರ್ಕಾರ ರಚಿಸಿದ್ದೀರಿ. ಎಷ್ಟು ದಿನ ಇರುತ್ತೀರಿ ಎಂಬುದನ್ನು ನಾನು ಕಾದು ನೋಡುತ್ತೇನೆ ಎಂದು ಸೂಚ್ಯವಾಗಿ ಹೇಳಿದರು.