ಬಿಜೆಪಿಗೆ ಒಲಿಯಲಿರುವ ಕೊನೆಯ ಮೇಯರ್ ಅವಧಿ

ಬೆಂಗಳೂರು, ಜು.29- ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣರಾದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಅನರ್ಹಗೊಂಡಿರುವ ಶಾಸಕ ಮುನಿರತ್ನ ಅವರ ಬೆಂಬಲಿಗರನ್ನು ಬಿಜೆಪಿ ಸಾಲಿನಲ್ಲಿ ಕೂರುವಂತೆ ಒತ್ತಾಯಿಸಿದ ಪ್ರಸಂಗ ಪಾಲಿಕೆ ಸಭೆಯಲ್ಲಿಂದು ನಡೆಯಿತು.

ಸಭೆ ಆರಂಭವಾಗುತ್ತಿದ್ದಂತೆ ಮುನಿರತ್ನ ಅವರ ಬೆಂಬಲಿಗರಾದ ವೆಂಕಟೇಶ್ ಹಾಗೂ ವೇಲುನಾಯ್ಕರ್ ಅವರು ಕಾಂಗ್ರೆಸ್ ಸಾಲಿನಲ್ಲಿ ಕುಳಿತುಕೊಳ್ಳಲು ಮುಂದಾದಾಗ ಕೆಲ ಬಿಜೆಪಿ ಸದಸ್ಯರು ನಮ್ಮ ಸಾಲಿನಲ್ಲಿ ಬಂದು ಕೂರುವಂತೆ ಕೈ ಸನ್ನೆ ಮಾಡಿದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ವೆಂಕಟೇಶ್ ಹಾಗೂ ವೇಲುನಾಯ್ಕರ್ ಕಾಂಗ್ರೆಸ್ ಸಾಲಿನಲ್ಲೇ ಆಸೀನರಾದರು.

ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್ , ಮುನಿರತ್ನ, ರೋಷನ್‍ಬೇಗ್ ಹಾಗೂ ಜೆಡಿಎಸ್ ಗೋಪಾಲಯ್ಯ ಅವರ 10ಕ್ಕೂ ಹೆಚ್ಚು ಬೆಂಬಲಿಗರು ತಮ್ಮ ನಾಯಕರ ನಡೆಯನ್ನು ಅನುಸರಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಸೆಪ್ಟೆಂಬರ್ 28ಕ್ಕೆ ಹಾಲಿ ಮೇಯರ್ ಗಂಗಾಂಬಿಕೆಯವರ ಅಧಿಕಾರಾವಧಿ ಪೂರ್ಣವಾಗಲಿದ್ದು, ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕಳೆದ ನಾಲ್ಕು ವರ್ಷಗಳಿಂದ 7 ಮಂದಿ ಪಕ್ಷೇತರರು, ಶಾಸಕರು ಹಾಗೂ ಸಂಸದರ ಬೆಂಬಲದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಿದ್ದರು. ಆದರೆ, ಅನರ್ಹಗೊಂಡಿರುವ ಐದು ಮಂದಿ ಅತೃಪ್ತರು ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ ಹಾಗೂ ಅವರ ಬೆಂಬಲಿಗರು ಸಹ ತಮ್ಮ ನಾಯಕರ ನಡೆಯನ್ನೇ ಅನುಸರಿಸಲು ತೀರ್ಮಾನಿಸಿರುವುದರಿಂದ ಕೊನೆಯ ಮೇಯರ್ ಅವಧಿ ಬಿಜೆಪಿಗೆ ಒಲಿಯಲಿದೆ.

ಹಾಗಾಗಿ ಅತೃಪ್ತರ ಬೆಂಬಲಿಗರನ್ನು ತಮ್ಮ ಆಸನದತ್ತ ಕರೆಯಲು ಬಿಜೆಪಿಯವರು ಮುಂದಾಗಿದ್ದು ವಿಶೇಷವಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ