ಸಿದ್ದರಾಮಯ್ಯನವರ ಬಳಿ ಬಂದು ಹಸ್ತಲಾಘವ ನೀಡಿದ ಸಿಎಂ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಜು.29- ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಸೇರಿದಂತೆ ಮತ್ತಿತರರಿಗೆ ಹಸ್ತಲಾಘವ ನೀಡಿದರು.

ಬೆಳಗ್ಗೆ 11 ಗಂಟೆಗೆ ಆರಂಭವಾದ ಕಲಾಪಕ್ಕೆ ಆಗಮಿಸಿದ ಯಡಿಯೂರಪ್ಪ ಪ್ರತಿ ಪಕ್ಷದ ಸಾಲಿನಲ್ಲಿ ಕೂತಿದ್ದ ಸಿದ್ದರಾಮಯ್ಯನವರ ಬಳಿ ಬಂದು ಕೈ ಕುಲುಕಿದರು.

ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಕೂಡ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿ ಇಬ್ಬರು ಮೆಲು ಧ್ವನಿಯಲ್ಲೇ ಪಿಸುಗುಟ್ಟಿದರು. ಬಳಿಕ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಅವರ ಬಳಿಗೆ ತೆರಳಿ ಯಡಿಯೂರಪ್ಪ ಹಸ್ತಲಾಘವ ಮಾಡಿದರು.

ಬದಲಾದ ಪರಿಸ್ಥಿತಿ:
ಕಳೆದ ಅಧಿವೇಶನಕ್ಕೂ ಇಂದು ನಡೆದ ಅಧಿವೇಶನಕ್ಕೂ ಹೋಲಿಕೆ ಮಾಡಿದರೆ ಸಾಕಷ್ಟು ವ್ಯತ್ಯಾಸ ಕಂಡು ಬಂತು.

ಆಡಳಿತ ಪಕ್ಷದಲ್ಲಿದ್ದವರು ಪ್ರತಿಪಕ್ಷ ಸ್ಥಾನದಲ್ಲಿ, ಪ್ರತಿಪಕ್ಷ ಸ್ಥಾನದಲ್ಲಿದ್ದವರು ಆಡಳಿತ ಪಕ್ಷದ ಸ್ಥಾನವನ್ನು ಇಂದು ಅಲಂಕರಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ, ಮುಖಂಡರಾದ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಉಮೇಶ್‍ಕತ್ತಿ, ಶ್ರೀರಾಮುಲು, ಸೋಮಣ್ಣ ಸೇರಿದಂತೆ ಮತ್ತಿತರರು ಮೊದಲನೇ ಸಾಲಿನಲ್ಲಿದ್ದರು.

ಇತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ, ಆರ್.ವಿ.ದೇಶಪಾಂಡೆ, ಜೆಡಿಎಸ್‍ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶ್ಯಂಪೂರ್ ಸೇರಿದಂತೆ ಮತ್ತಿತರರು ಪ್ರತಿಪಕ್ಷದ ಸ್ಥಾದಲ್ಲಿದ್ದರು.

ಬಿಜೆಪಿ ಶಾಸಕರಲ್ಲಿ ಅತಿಯಾದ ಆತ್ಮವಿಶ್ವಾಸ, ಲವಲವಿಕೆ ಕಂಡು ಬಂದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರಲ್ಲಿ ಒಂದು ರೀತಿಯ ನೀರವ ಮೌನ ಆವರಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ