ವಿಶ್ವಾಸ ಮತ ಗೆದ್ದ ಸಿಎಂ ಬಿಎಸ್​ ಯಡಿಯೂರಪ್ಪ, ಸುಭದ್ರ ಆಡಳಿತ ನೀಡುವ ಭರವಸೆ

ಬೆಂಗಳೂರು: ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸಲಾಗದೇ ಮುರಿದುಬಿದ್ದ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿಎಸ್ಯಡಿಯೂರಪ್ಪ ಇಂದು ಸದನದಲ್ಲಿ ವಿಶ್ವಾಸಸಮತ ಯಾಚಿಸಿದರು. ಜತೆಗೆ 105 ಸದಸ್ಯರ ಮತಗಳೊಂದಿಗೆ ಬಹುಮತ ಸಾಬೀತುಪಡಿಸಿದರು

ಬಿಎಸ್​ ಯಡಿಯೂರಪ್ಪ ಅವರ ಪ್ರಸ್ತಾಪವನ್ನು ಸದನದ ಮುಂದಿಟ್ಟ ಸ್ಪೀಕರ್​ ರಮೇಶ್​​ ಕುಮಾರ್​ ಧ್ವನಿಮತದ ಮೂಲಕ ವಿಶ್ವಾಸ ಮತ ಕೇಳಿದರು. ಧ್ವನಿಮತದಲ್ಲಿ ಸದನದ ವಿಶ್ವಾಸವನ್ನು ಬಿಎಸ್​ವೈ ಗೆದ್ದರು.

17  ಶಾಸಕರ ಅನರ್ಹತೆ ಬಳಿಕ ಸದನದ ಸಂಖ್ಯಾಬಲ 207ಕ್ಕೆ ಕುಸಿದಿತ್ತು. ಈ ಸಂದರ್ಭದಲ್ಲಿ ಸರ್ಕಾರ ರಚನೆಗೆ 104 ಮ್ಯಾಜಿಕ್​​ ನಂಬರ್​ ಅವಶ್ಯಕವಾಗಿದ್ದು, 106 ಶಾಸಕರ ಬೆಂಬಲ ಹೊಂದಿದ್ದ ಬಿಜೆಪಿ ವಿಶ್ವಾಸ ಮತದಲ್ಲಿ ಗೆಲುವು ಕಂಡಿತು.

ಈ ವೇಳೆ ಮಾತನಾಡಿದ ನೂತನ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಇನ್ನು ಮೂರು ವರ್ಷ 10 ತಿಂಗಳು ಸ್ವಚ್ಛ, ದಕ್ಷ ಆಡಳಿತ ನೀಡುವ ಭರವಸೆ ನೀಡಿದರು. ನನ್ನ ಆಡಳಿತ ಸಮಯದಲ್ಲಿ ಯಾವುದೇ ನಿರ್ಧಾರ ತಪ್ಪು ಎಂದು ಕಂಡು ಬಂದಲ್ಲಿ ವಿರೋಧ ಪಕ್ಷಗಳು ಸಲಹೆ ನೀಡಿ, ಅದನ್ನು ನಾನು ಸ್ವೀಕರಿಸಿ, ತಪ್ಪು ತಿದ್ದುಕೊಳ್ಳುವ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ಹೋರಾಟದಿಂದ ಬಂದ ನಾನು ಇದೇ ಹೋರಾಟದಿಂದ ಮತ್ತೆ ಮುಖ್ಯಮಂತ್ರಿಯಾಗಿದ್ದೇನೆ. ಸಾಧನೆ ಮಾತನಾಡಬೇಕು. ಮಾತನಾಡುವುದೇ ಸಾಧನೆಯಾಗಬಾರದು ಎಂಬ ಮಾತಿನಲ್ಲಿ ನಾನು ನಂಬಿಕೆ ಹೊಂದಿದ್ದೇನೆ. ಇನ್ನು ಮುಂದಿನ ದಿನಗಳಲ್ಲಿ ಜನರ ಕಲ್ಯಾಣಕ್ಕಾಗಿ ಆಡಳಿತ ನಡೆಸುತ್ತೇನೆ. ಜನರ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ ಎಂದರು.

ವಿಶ್ವಾಸ ಮಂಡನೆ ಬಳಿಕ ಮೂರು ತಿಂಗಳಿಗೆ  ಲೇಖನುದಾನ ಮಂಡಿಸಿದರು. ಈ ಹಿಂದಿನ ಮೈತ್ರಿ ಸರ್ಕಾರದ ಬಜೆಟ್​ನಲ್ಲಿ ಯಾವುದೇ ಬದಲಾವಣೆ ಮಾಡದೇ ಲೇಖನುದಾನ ಮಂಡಿಸಿರುವುದಾಗಿ ಸದನದಲ್ಲಿ ತಿಳಿಸಿದರು.

ಕೇವಲ ಮೂರು ತಿಂಗಳಿಗೆ ಲೇಖನುದಾನ ವಿಧೇಯಕಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಸಿದವು. ಬಳಿಕ ಸದನ ಈ ಹಣಕಾಸು ವಿಧೇಯಕಕ್ಕೆ ಅನುಮೋದನೆ ನೀಡಿತು.

ಜತೆಗೆ 3,327 ಕೋಟಿ ರೂ. ಪೂರಕ ಬಜೆಟ್​ಗೂ ಯಡಿಯೂರಪ್ಪ ಸದನದ ಅನುಮೋದನೆ ಪಡೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ