ನವದೆಹಲಿ, ಜು.28- ಒಂದಿಲ್ಲೊಂದು ವಿವಾದಾತ್ಮಕ ಮತ್ತು ಆಕ್ಷೇಪಾರ್ಹ ಹೇಳಿಕೆಗಳಿಂದ ತೀವ್ರ ಖಂಡನೆಗೆ ಒಳಗಾಗಿರುವ ಸಮಾಜವಾದಿ ಪಕ್ಷದ ಸಂಸದ ಅಜಂಖಾನ್ ವಿರುದ್ಧ ಲೋಕಸಭಾಧ್ಯಕ್ಷ ಓಂ ಬಿರ್ಲಾ ನಾಳೆ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಸದನದಲ್ಲಿ ತಮ್ಮ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ಸಂಸದ ಅಜಂಖಾನ್ ಕ್ಷಮೆಯಾಚಿಸುವುದು ಮಾತ್ರವಲ್ಲ, ಐದು ವರ್ಷಗಳ ಕಾಲ ಲೋಕಸಭೆಯಿಂದ ಅಮಾನತ್ತು ಮಾಡಬೇಕೆಂದು ಬಿಜೆಪಿ ಸಂಸದೆ ರಮಾದೇವಿ ಹೇಳಿದ್ದಾರೆ.
ಅಜಂಖಾನ್ಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಐದು ವರ್ಷಗಳ ಕಾಲ ಸದನದಿಂದ ಅಮಾನತು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತ್ರಿವಳಿ ತಲಾಖ್ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಸ್ಪೀಕರ್ ಅನುಪಸ್ಥಿತಿಯಲ್ಲಿ ಕಲಾಪ ನಡೆಸುತ್ತಿದ್ದ ಬಿಜೆಪಿ ಸಂಸದೆ ರಮಾದೇವಿಯವರನ್ನು ಉದ್ದೇಶಿಸಿ ಮಾತನಾಡಿದ ಅಜಂಖಾನ್, ಆಪ್ ಕೀ ಆಂಖೋ ಮೇ ಆಂಖೇ ಡಾಲ್ ಕೇ ಬಾತ್ ಕರ್ ನೇ ಕಾ ಮನ್ ಕರ್ ತಾ ಹೈ (ನಿಮ್ಮ ಕಣ್ಣಲ್ಲಿ ಕಣ್ಣನಿಟ್ಟು ಮಾತನಾಡುವ ಬಯಕೆ ಉಂಟಾಗುತ್ತಿದೆ) ಎಂದು ಹೇಳಿದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಭಾಧ್ಯಕ್ಷರ ಪೀಠದಲ್ಲಿದ್ದ ರಮಾದೇವಿ ಅವರು ಇದು ಮಾತನಾಡುವ ರೀತಿ ಅಲ್ಲ, ಮತ್ತು ಈ ಮಾತುಗಳನ್ನು ಕಡತದಿಂದ ತೆಗೆದು ಹಾಕಿ ಎಂದು ಸೂಚನೆ ಕೊಟ್ಟಿದ್ದರು. ತಕ್ಷಣ ಅಜಂಖಾನ್ ಕ್ಷಮೆಯಾಚಿಸಿದ್ದರೆ ಕ್ಷಮಿಸಬಹುದಿತ್ತು. ಆದರೆ, ಹಾಗೆ ಮಾಡದೆ ಆತ ಹೊರಟು ಹೋದ ಎಂದು ಬಿಹಾರದ ಸಂಸದೆ ಆಗಿರುವ ರಮಾದೇವಿ ಹೇಳಿದ್ದಾರೆ.
ಸಂಸತ್ತು ಹಾಗೂ ಎಲ್ಲಾ ಸಂಸದರಿಗೂ ಅಜಂಖಾನ್ ಅಪಮಾನ ಮಾಡಿದ್ದು, ಆ ಮಾತುಗಳನ್ನು ಕಡತದಿಂದ ತೆಗೆದುಹಾಕಲಾಗಿದೆ.ಆದರೂ, ಆತ ಬರೀ ಕ್ಷಮೆಯಾಚಿಸಿದರೆ ಸಾಲದು 5 ವರ್ಷಗಳ ಕಾಲ ಸದನದಿಂದಲೇ ಅಮಾನತು ಮಾಡಬೇಕು ಎಂದಿದ್ದಾರೆ.
ಈ ಸಂಬಂಧ ವಿವಿಧ ಪಕ್ಷಗಳ ಸದಸ್ಯರೊಂದಿದಿಗೆ ಸಭೆ ನಡೆಸಿದ ಬಳಿಕ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪೀಕರ್ ಹೇಳಿದ್ದಾರೆ.
ಅಜಂಖಾನ್ ಹೇಳಿಕೆಯನ್ನು ಕಲಾಪದಲ್ಲಿಯೂ ತೀವ್ರವಾಗಿ ಖಂಡಿಸಲಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮತ್ತು ಕಾನೂನು ಸಚಿವ ರವಿಶಂಕರ್ಪ್ರಸಾದ್ ಸೇರಿದಂತೆ ಬಿಜೆಪಿ ಸಂಸದರು ಖಾನ್ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.