ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ತುರ್ತು ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ.
ಸ್ಪೀಕರ್ ರಮೇಶ್ ಅವರು ಇಂದು ಬೆಳಗ್ಗೆ 11.30ಕ್ಕೆ ತುರ್ತು ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ. ಈ ಮೂಲಕ ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಶಾಕ್ ಕೊಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ ಅಥವಾ ಕೆಲ ಅತೃಪ್ತರ ರಾಜೀನಾಮೆ ಅಂಗೀಕಾರ ಮಾಡುತ್ತಾರಾ, ಉಳಿದ ಅತೃಪ್ತರನ್ನು ಅನರ್ಹತೆ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಸದ್ಯಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಏನು ಹೇಳಬಹುದು ಎಂಬುದು ಕುತೂಹಲಕಾರಿಯಾಗಿದೆ.
ಈ ಹಿಂದೆ ಅಂದರೆ ಬುಧವಾರ ಸ್ಪೀಕರ್ ಅವರು ಸಂಜೆ ವೇಳೆ ಸುದ್ದಿಗೋಷ್ಠಿ ನಡೆಸಿದ್ದರು. ಆಗ ಅತೃಪ್ತ ಶಾಸಕರಲ್ಲಿ ಪಕ್ಷೇತರ ಶಾಸಕರ ಆರ್. ಶಂಕರ್, ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಹಳ್ಳಿ ಮೂವರು ಶಾಸಕರನ್ನು ಅನರ್ಹ ಮಾಡಿದ್ದರು. ಮೂವರು ಶಾಸಕರನ್ನು ಅನರ್ಹ ಮಾಡಿದ್ದಕ್ಕೆ ಕಾರಣಗಳ ವಿವರಗಳನ್ನು ನೀಡಿದ್ದರು. ಆದರೆ ಈ ಬಾರಿ ಸುದ್ದಿಗೋಷ್ಠಿಯಲ್ಲಿ ಏನು ಹೇಳುತ್ತಾರೆ ಎಂದು ಅತೃಪ್ತ ಶಾಸಕರಲ್ಲಿ ಅನರ್ಹ ಭೀತಿ ಶುರುವಾಗಿದೆ.
ಇನ್ನೊಂದೆಡೆ ಸೋಮವಾರ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸಮತ ಸಾಬೀತು ಮಾಡಲಿದ್ದಾರೆ. ಆದರೆ ಇದಕ್ಕೂ ಮೊದಲೇ ಸ್ಪೀಕರ್ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಆದರೆ ಇಂದಿನ ಸುದ್ದಿಗೋಷ್ಠಿಯಲ್ಲಿ ತಮ್ಮ ವೈಯಕ್ತಿಯ ವಿಚಾರವನ್ನು ಮಾತನಾಡುತ್ತಾರಾ ಅಥವಾ ಅತೃಪ್ತ ಶಾಸಕರ ಭವಿಷ್ಯವನ್ನು ನಿರ್ಧರಿಸಲಿದ್ದಾರಾ ಎಂದು ಪ್ರಶ್ನೆ ಮೂಡಿದೆ.