ಕೆ.ಆರ್.ಪೇಟೆ,ಜು.27-ತಮ್ಮ ಹುಟ್ಟೂರು ಬೂಕನಕೆರೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ನಿನ್ನೆ ನಾನೊಬ್ಬ ಮಾತ್ರ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಹೈಕಮಾಂಡ್ ಒಪ್ಪಿಗೆ ಪಡೆದು ಶೀಘ್ರವೇ ಸಚಿವ ಸಂಪುಟ ರಚನೆ ಮಾಡುವುದಾಗಿ ಹೇಳಿದರು.
ಸೋಮವಾರ ಬಹುಮತ ಸಾಬೀತು ಪಡಿಸುವುದಾಗಿ ಹೇಳಿದ್ದೇನೆ. ದೇವರ ಆಶೀರ್ವಾದಿಂದ ಮುಖ್ಯಮಂತ್ರಿಯಾಗಿದ್ದೇನೆ. ಆ ದೇವರ ದಯೆಯಿಂದಲೇ ಬಹುಮತವನ್ನು ಸಾಬೀತು ಪಡಿಸುತ್ತೇನೆ ಎಂದು ತಿಳಿಸಿದರು.
ನಾನು ಹುಟ್ಟಿದ ಊರು ಬೂಕನಕೆರೆಗೆ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಬಂದಿರುವುದು ನನಗೆ ಅತ್ಯಂತ ಸಂತಸ ತಂದಿದೆ. ನನ್ನ ಊರಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಇದನ್ನು ಮಾದರಿ ಗ್ರಾಮವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವ ಮೂಲಕ ನಾಗಾಲೋಟದಲ್ಲಿ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.
ತಮ್ಮ ಗ್ರಾಮಕ್ಕೆ ಆಗಮಿಸಿದ ತಕ್ಷಣ ಮನೆದೇವರು ಗವಿಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗ್ರಾಮದೇವತೆ ಗೋಗಾಲಮ್ಮ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಮಹಿಳೆಯರು ಆರತಿ ಎತ್ತಿ ತಮ್ಮ ಊರಿನ ಸುಪುತ್ರನನ್ನು ಬರಮಾಡಿಕೊಂಡರು. ನಂತರ ತಾವು ಹುಟ್ಟಿದ ಮನೆಗೆ ತೆರಳಿದ ಯಡಿಯೂರಪ್ಪ ತಮ್ಮ ಅತ್ತಿಗೆ ಶಾರದಮ್ಮ ಅವರ ಆರೋಗ್ಯ ವಿಚಾರಿಸಿ ಅವರೊಂದಿಗೆ ಉಪಹಾರ ಸೇವಿಸಿದರು.
ಬಿಜೆಪಿ ಕಾರ್ಯಕರ್ತರು ಹಾಗೂ ಯಡಿಯೂರಪ್ಪ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ತಿನಿಸಿ ಸಂಭ್ರಮಿಸಿದರು.
ಈ ವೇಳೆ ತಾಲೂಕು ಪಂಚಾಯ್ತಿ ಸದಸ್ಯೆ ಮೀನಾಕ್ಷಿ ಪುಟ್ಟರಾಜು ಅವರು ಗ್ರಾಮದ ಪರವಾಗಿ ಸಿಎಂಗೆ ಫಲ-ತಾಂಬೂಲ ನೀಡಿ ಗೌರವಿಸಿದರು. ನಂತರ ಯಡಿಯೂರಪ್ಪ ತಮ್ಮ ಬಾಲ್ಯಸ್ನೇಹಿತ ತಿರುಮಲೇಗೌಡರ ಯೋಗಕ್ಷೇಮ ವಿಚಾರಿಸಿ ಅವರೊಂದಿಗೆ ಲೋಕಾಭಿರಾಮವಾಗಿ ಕೆಲ ಸಮಯ ಮಾತನಾಡಿದರು. ಈ ಸಂದರ್ಭದಲ್ಲಿ ಊರಿನ ಹಲವಾರು ಹಿರಿಯರನ್ನು ಮಾತನಾಡಿಸಿದರು.
ಇದೇ ಸಂದರ್ಭದಲ್ಲಿ ರೈತ ಸಂಘದ ಕಾರ್ಯಕರ್ತರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹೊಸಹೊಳಲು ನೀರ್ಗಾಲುವೆ ಯೋಜನೆಯನ್ನು ಶೀಘ್ರ ಪ್ರಾರಂಭಿಸುವಂತೆ ಮನವಿ ಮಾಡಿದರು. ಇದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದರು.
ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜುನಾಥ್,ತಾ.ಪಂ ಅಧ್ಯಕ್ಷೆ ಜಯಲಕ್ಷ್ಮಿ ಸ್ವಾಮಿನಾಯ್ಕ್, ಜಿ.ಪಂ ಮಾಜಿ ಸದಸ್ಯೆ ಸರ್ವಮಂಗಳಾ ವೆಂಕಟೇಶ್, ತಾಪಂ. ಮಾಜಿ ಅಧ್ಯಕ್ಷ ಬಿ.ಜವರಾಯಿಗೌಡ, ಮುಖಂಡ ಸ್ವಾಮಿಗೌಡ, ತಾಲೂಕು ಯಡಿಯೂರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಮಧುಸೂಧನ್, ಕೆಎಮ್ಎಫ್ ಮಾಜಿ ನಿರ್ದೇಶಕ ಅಶೋಕ್ ಮತ್ತಿತರರು ಯಡಿಯೂರಪ್ಪ ಅವರಿಗೆ ಶುಭ ಕೋರಿದರು.
ನಂತರ ಬೂಕನಕೆರೆಯಿಂದ ಯಡಿಯೂರಪ್ಪ, ತಮ್ಮ ಪುತ್ರ ರಾಘವೇಂದ್ರ, ಶಾಸಕ ಬಸವರಾಜ್ ಬೊಮ್ಮಾಯಿ ಮತ್ತಿತರರೊಂದಿಗೆ ಮೇಲುಕೋಟೆಗೆ ತೆರಳಿದರು.