ಬಿಜೆಪಿ ಸರ್ಕಾರದ ಆಯಸ್ಸು 6 ತಿಂಗಳಿನಿಂದ 1 ವರ್ಷ ಮಾತ್ರ-ಮಾಜಿ ಸಚಿವ ಎಂ.ಬಿ.ಪಾಟೀಲ್

ವಿಜಯಪುರ,ಜು.27- ರಾಜೀನಾಮೆ ನೀಡಿ ಮುಂಬೈ ಸೇರಿಕೊಂಡಿದ್ದ ಅತೃಪ್ತ ಶಾಸಕರ ಪೈಕಿ ಇಬ್ಬರು ಪಕ್ಷಕ್ಕೆ ವಾಪಾಸ್ಸಾಗಲು ಸಿದ್ದರಾಮಯ್ಯನವರಿಗೆ ಕರೆ ಮಾಡಿದ್ದರು. ಆದರೆ ಅವರು ಕರೆ ಸ್ವೀಕರಿಸಲಿಲ್ಲ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈನಲ್ಲಿದ್ದ ಕಾಂಗ್ರೆಸ್ ಶಾಸಕರ ಪೈಕಿ ಇಬ್ಬರು ವಾಪಸ್ ಬರಲು ನಿರ್ಧರಿಸಿ ಸಿದ್ದರಾಮಯ್ಯನವರೊಂದಿಗೆ ಮಾತನಾಡಲು ಪ್ರಯತ್ನಿಸಿದರಾದರು ಅವರು, ಕರೆ ಸ್ವೀಕರಿಸಲಿಲ್ಲ. ಉಳಿದ ಶಾಸಕರು ಯಾರನ್ನು ಸಂಪರ್ಕಿಸಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಕರೆ ಮಾಡಿರುವ ಅತೃಪ್ತರು ಯಾರೆಂದು ತನಗೆ ಗೊತ್ತು, ಆದರೆ ಮಾಧ್ಯಮದ ಮುಂದೆ ನಾನು ಹೇಳೋದು ಸರಿಯಿರಲ್ಲ. ಅದನ್ನು ಸಿದ್ದರಾಮಯ್ಯ ಅವರೇ ಹೇಳುತ್ತಾರೆ ಎಂದು ಹೇಳುವ ಮೂಲಕ ಕರೆ ಮಾಡಿದವರು ಯಾರು ಎಂಬುದನ್ನು ಎಂ.ಬಿ ಪಾಟೀಲ್ ಬಾಯಿ ಬಿಟ್ಟಿಲ್ಲ.

ಪಕ್ಷಾಂತರ ನಿಷೇಧ ಕಾಯ್ದೆ ಸಂಬಂಧ ಪರಿಚ್ಛೇದ 10ಕ್ಕೆ ತಿದ್ದುಪಡಿ ಆಗಬೇಕಿದೆ. ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ನೀಡಿರುವ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಬೇಕು. ಈ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯನ್ನು ವ್ಯವಸ್ಥಿತವಾಗಿ ಜಾರಿಗೆ ತರಲು ಸಹಕರಿಸಬೇಕಿದೆ ಎಂದರು.

ಗೃಹ ಸಚಿವನಾಗಿ ನಾನೇ ಝೀರೋ ಟ್ರಾಫಿಕ್ ಬಳಸಿಲ್ಲ. ಅಂಥದ್ದರಲ್ಲಿ ಅತೃಪ್ತರಿಗೆ ಹೇಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲು ಸಾಧ್ಯ. ಆಡಳಿತ ಪಕ್ಷದ ಶಾಸಕರನ್ನು ಸೆಳೆದು, ಪಕ್ಷಾಂತರ ಮಾಡಿಸಿ ಅವರಿಗೆ ಸಚಿವ ಸ್ಥಾನದ ಆಫರ್ ನೀಡುವುದು ಸರಿಯಾದ ವ್ಯವಸ್ಥೆಯಲ್ಲ. ಈ ರೀತಿಯ ವ್ಯವಸ್ಥೆ ಪ್ರಾರಂಭವಾದರೆ ಬೇರೆ ರಾಜ್ಯಗಳಿಗೂ ಹರಡುತ್ತದೆ. ನಂತರ ಇದು ಕರ್ನಾಟಕದ ಫಾರ್ಮುಲಾ ಎಂದು ದೇಶಾದ್ಯಂತ ಪ್ರಚಾರ ಪಡೆಯುತ್ತದೆ. ಆಗ ರಾಜ್ಯದ ಗೌರವಕ್ಕೆ ಧಕ್ಕೆ ಬರುತ್ತದೆ ಇದನ್ನು ರಾಜಕೀಯ ನಾಯಕರು ಅರಿಯಬೇಕಿದೆ ಎಂದು ಹರಿಹಾಯ್ದರು.

ಪ್ರಸ್ತುತ ಬಿಜೆಪಿ ಸರ್ಕಾರದ ಆಯಸ್ಸು 6 ತಿಂಗಳಿನಿಂದ 1 ವರ್ಷ ಮಾತ್ರ. ಅಷ್ಟರೊಳಗೆ ಈ ಸರ್ಕಾರ ಪತನವಾಗುತ್ತದೆ. ಬಿ.ಎಸ್.ಯಡಿಯೂರಪ್ಪನವರು ರಾಜಕೀಯ ಜೀವನದ ಕಡೆಯ ಹಂತದಲ್ಲಿದ್ದಾರೆ. ದುರಾಸೆಯಿಂದ ಮುಖ್ಯಮಂತ್ರಿಯಾಗಿದ್ದಾರೆ. ಈ ಸರ್ಕಾರ ಹೆಚ್ಚು ದಿನ ಉಳಿಯುವ ಗ್ಯಾರಂಟಿ ಇಲ್ಲ ಎಂದು ಎಂ.ಬಿ.ಪಾಟೀಲ್ ಹೇಳಿದರು.

ವಾಮಮಾರ್ಗದಿಂದ ಶಾಸಕರನ್ನು ಖರೀದಿಸಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಶೀಘ್ರ ಪತನವಾಗಲಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ