ಬೆಂಗಳೂರು,ಜು.27- ಕಾರ್ಯಕರ್ತರು, ಮುಖಂಡರು ಎಲ್ಲರೂ ಸೇರಿ ಪಕ್ಷಕ್ಕೆ ಶಕ್ತಿ ತುಂಬುವಂತಹ ಕೆಲಸವನ್ನು ಮಾಡಬೇಕೆಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ತಿಳಿಸಿದರು.
ಜೆಪಿಭವನದಲ್ಲಿ ನಡೆದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನಮ್ಮ ಪ್ರಾದೇಶಿಕ ಪಕ್ಷವನ್ನು ಬಲಗೊಳಿಸಬೇಕಿದೆ. ಎಲ್ಲರೂ ಪಕ್ಷ ಸಂಘಟನೆಗೆ ಒತ್ತು ನೀಡಿ ಕೆಲಸ ಮಾಡಬೇಕು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರದ ಬಗ್ಗೆ ಸಭಾಧ್ಯಕ್ಷರು ತೀರ್ಮಾನ ಕೈಗೊಳ್ಳಬೇಕಿದೆ. ರಾಜೀನಾಮೆ ನೀಡಿರುವ ಶಾಸಕರು ಈಗಾಗಲೇ ಸುಪ್ರೀಂಕೋರ್ಟ್ನ ಮೊರೆ ಹೋಗಿದ್ದಾರೆ. ಆ ವಿಚಾರದ ಕಡೆ ಹೆಚ್ಚು ಗಮನಹರಿಸುವುದಕ್ಕಿಂತ ಪಕ್ಷ ಸಂಘಟನೆ ಕಡೆ ಗಮನಹರಿಸೋಣ ಎಂದು ಸಲಹೆ ಮಾಡಿದರು.
ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಮಾತನಾಡಿ, ಮುಂಬರುವ ವಿಧಾನಸಭೆ ಉಪಚುನಾವಣೆಗಳಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ಸ್ನೇಹಪರ ಸ್ಪರ್ಧೆ ಮಾಡುವುದು ಸೂಕ್ತ. ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡರೆ ಕಾರ್ಯಕರ್ತರ ನಡುವೆ ಗೊಂದಲ ಉಂಟಾಗಿ ನಿರೀಕ್ಷಿತ ಜಯ ದೊರೆಯದಿರುವುದು ಕಳೆದ ಚುನಾವಣೆಗಳಿಂದ ದೃಢಪಟ್ಟಿದೆ.
ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಹೋರಾಟ ಮಾಡಬೇಕು. ಪಕ್ಷ ಸಂಘಟನೆಯಲ್ಲಿನ ಕೆಲವೊಂದು ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿಕೊಳ್ಳಬೇಕು ಹಾಗೂ ಚುನಾವಣೆಯಲ್ಲಿನ ಸೋಲಿನ ಕಾರಣಗಳನ್ನು ಪತ್ತೆಹಚ್ಚಿ ಪಕ್ಷ ಸಂಘಟನೆ ಮಾಡಬೇಕಿದೆ. ಇದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದರು.
ರಾಜೀನಾಮೆ ನೀಡಿರುವ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ನಡೆದರೆ ಅದಕ್ಕೆ ಪಕ್ಷವನ್ನು ಸಜ್ಜುಗೊಳಿಸುವ ಬಗ್ಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯವನ್ನು ದೇವೇಗೌಡರು ಪಡೆದರು.
ಸಭೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಶಬ್ಬೀ ಉಲ್ಲಾ, ಬೆಂಗಳೂರು ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ ರುತ್ ಮನೋರಮಾ, ಮಾಜಿ ಸಚಿವ ಎನ್.ಎಂ.ನಬಿ ಪಕ್ಷದ ಮುಖಂಡರಾದ ಶ್ರೀಕಾಂತ್, ದತ್ತಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.