ಇದು ಜನರ ಜಯ ಅಲ್ಲ-ಕುದುರೆ ವ್ಯಾಪಾರದ ಜಯ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜು.27- ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವುದು ಸಂವಿಧಾನ ಬಾಹಿರವಾದ ಕ್ರಮ. ಇದು ಜನರ ಜಯ ಅಲ್ಲ. ಕುದುರೆ ವ್ಯಾಪಾರದ ಜಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆ ಮಾಡಬೇಕಾದರೆ ಸ್ಪಷ್ಟ ಬಹುಮತ ಇರಬೇಕು. ಪ್ರಸ್ತತ ವಿಧಾನಸಭೆಯ ಸಂಖ್ಯಾಬಲ 221. ಸರ್ಕಾರ ರಚನೆ ಮಾಡಬೇಕಾದರೆ 211 ಮಂದಿ ಶಾಸಕರ ( ಬಹುಮತಕ್ಕೆ )ಬೆಂಬಲವಿರಬೇಕು. ಅಷ್ಟೂ ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಕೆ ಮಾಡಬೇಕು. ನಂತರ ಇವರಿಗೆ ಸರ್ಕಾರ ರಚನೆಗೆ ಅವಕಾಶ ಇರಬೇಕು ಎಂದರು.

ಬಿ.ಎಸ್.ಯಡಿಯೂರಪ್ಪನವರು 211ರ ಮಂದಿ ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆಯೇ? ಅವರ ಬಳಿ ಇರುವುದು ಕೇವಲ 105 ಮಂದಿ ಶಾಸಕರು. ಇನ್ನು ಉಳಿದವರು ಮುಂಬೈನಲ್ಲಿರುವವರು. ಈಗಲೂ ಅವರು ಕಾಂಗ್ರೆಸ್-ಜೆಡಿಎಸ್ ಪಕ್ಷದವರೇ ಆಗಿದ್ದರೆ ಅವರ ಹೆಸರುಗಳನ್ನು ಇವರು ಕೊಡಲು ಸಾಧ್ಯವಿಲ್ಲ. ಹಾಗಿದ್ದರೂ ಇವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಹೇಳಿದರು.

ಬಿಜೆಪಿ ರಾಜಭವನವನ್ನು ದುರುಪಯೋಗಪಡಿಸಿಕೊಂಡು ಬಹುಮತ ಇಲ್ಲದಿದ್ದರೂ ಸರ್ಕಾರ ರಚನೆ ಪ್ರಯತ್ನ ಮಾಡಿದೆ. ಪ್ರಮಾಣ ವಚನ ತೆಗೆದುಕೊಂಡಿರುವುದು ನಿಯಮ ಬಾಹಿರವಾಗಿದೆ. ಪ್ರಮಾಣ ವಚನದ ನಂತರ ಯಡಿಯೂರಪ್ಪನವರು ಇದು ಜನರ ವಿಜಯ ಎಂದಿದ್ದಾರೆ. ಇದು ಜನರ ವಿಜಯವಲ್ಲ. ಕುದುರೆ ವ್ಯಾಪಾರದ ಜಯ ಎಂದು ಲೇವಡಿ ಮಾಡಿದರು.

ಮುಂಬೈನಲ್ಲಿರುವ ಅತೃಪ್ತ ಶಾಸಕರ ಪೈಕಿ ಕೆಲವರು ನನಗೆ ದೂರವಾಣಿ ಕರೆ ಮಾಡಿದ್ದು ನಿಜ. ಆದರೆ ನಾನು ಕರೆ ಸ್ವೀಕರಿಸಿಲ್ಲ. ಅವರ ಜೊತೆ ಮಾತನಾಡಲು ನನಗೆ ಇಷ್ಟವಿಲ್ಲ.ಅನರ್ಹತೆಯ ಭಯಕ್ಕೆ ಒಳಗಾಗಿ ಕರೆ ಮಾಡಿದ್ದಾರೆ. ಈಗ ಅದೆಲ್ಲ ಬೇರೆ ಮಾತು. ಅದು ನನಗೆ ಮುಖ್ಯವಲ್ಲ.

ಮುಂಬೈನಲ್ಲಿ ಇರುವವರನ್ನು ಕುದುರೆ ವ್ಯಾಪಾರ ಮಾಡಿ ಕೂಡಿ ಹಾಕಲಾಗಿದೆ. ಅವರು ಈಗ ಕರೆ ಮಾಡುವ ಬದಲು ಮೊದಲೇ ಬಂದಿದ್ದರೆ ಕುಮಾರಸ್ವಾಮಿ ಸರ್ಕಾರ ಪತನವಾಗುತ್ತಿರಲಿಲ್ಲ ಎಂದು ಹೇಳಿದರು.

ಸಂಖ್ಯಾಬಲ ಇಲ್ಲದಿದ್ದರೂ ಕೂಡ ಸರ್ಕಾರ ರಚಿಸಿರುವ ಬಿಜೆಪಿ ಬಹುಮತವನ್ನು ಹೇಗೆ ಸಾಬೀತು ಮಾಡುತ್ತದೆ? ಕುದುರೆ ವ್ಯಾಪಾರ ಮಾಡಿ ಸರ್ಕಾರ ರಚನೆ ಮಾಡೋಕೆ ಮುಂದಾಗಿದ್ದಾರೆ. ಜನರಿಗೆ ಇದೆಲ್ಲ ಅರ್ಥವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಜೆಡಿಎಸ್ ಶಾಸಕರು ಬಿಜೆಪಿ ಸಖ್ಯದ ಬಗ್ಗೆ ಒಲವು ತೋರುತ್ತಿರುವುದರ ಬಗ್ಗೆ ನನಗೇನೂ ಗೊತ್ತಿಲ್ಲ. ಆ ಬಗ್ಗೆ ಹೇಳಿಕೆ ನೀಡಿರುವ ಜಿ.ಟಿ.ದೇವೇಗೌಡರನ್ನೇ ಕೇಳಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ