ನವದೆಹಲಿ, ಜು.26– ಬಿಹಾರದ ಸಂಸದೆ ರಮಾದೇವಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಕ್ಷಮೆ ಕೋರಬೇಕು. ಅವರು ಕ್ಷಮೆ ಕೋರಲು ವಿಫಲರಾದರೆ ಸದನದಿಂದ ಅಮಾನತುಗೊಳಿಸಬೇಕೆಂದು ಮಹಿಳಾ ಸಂಸದರು ಲೋಕಸಭೆಯಲ್ಲಿಂದು ಆಗ್ರಹಿಸಿದರು.
ನಿನ್ನೆ ತ್ರಿವಳಿ ತಲಾಕ್ ಮಸೂದೆ ಮಂಡನೆ ಕುರಿತ ಚರ್ಚೆ ವೇಳೆ ಖಾನ್ ಬಿಜೆಪಿ ಸಂಸದೆ ರಮಾದೇವಿ ಅವರನ್ನು ಉದ್ದೇಶಿಸಿ ನೀಡಿದ್ದ ಆಕ್ಷೇಪಾರ್ಹ ಹೇಳಿಕೆ ಲೋಕಸಭೆಯಲ್ಲಿಂದು ಮಾರ್ಧನಿಸಿತು.
ಜವಳಿ ಸಚಿವೆ ಸ್ಮೃತಿ ಇರಾನಿ ಈ ವಿಷಯ ಪ್ರಸ್ತಾಪಿಸಿ, ಇಂತಹ ಹೇಳಿಕೆ ನೀಡುವ ಮೂಲಕ ಅಜಂಖಾನ್ ಸಂಸದರಿಗೆ ಕಳಂಕ ತಂದಿದ್ದಾರೆ. ಅವರು ಸದನದ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಅವರನ್ನು ಸಸ್ಪೆಂಡ್ ಮಾಡಬೇಕೆಂದು ಲೋಕಸಭಾಧ್ಯಕ್ಷ ಓಂಬಿರ್ಲಾ ಅವರಲ್ಲಿ ಮನವಿ ಮಾಡಿದರು.
ಕಾನೂನು ಸಚಿವ ರವಿಶಂಕರ್ ಪ್ರಸಾದ್ ಕೂಡ ಖಾನ್ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಇವರನ್ನು ಸಸ್ಪೆಂಡ್ ಮಾಡುವಂತೆ ಮನವಿ ಮಾಡಿದರು. ಬಿಜೆಪಿ ಮಹಿಳಾ ಸಂಸದರೆಲ್ಲರೂ ಖಾನ್ ಹೇಳಿಕೆಯನ್ನು ಖಂಡಿಸಿದರು.
ನಂತರ ಹೇಳಿಕೆ ನೀಡಿದ ಸ್ಪೀಕರ್ ಓಂಬಿರ್ಲಾ, ಈ ಬಗ್ಗೆ ಚರ್ಚಿಸಿ ನಂತರ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.