ಸರ್ಕಾರ ರಚನೆಗೆ 111 ಸೀಟುಗಳು ಅಗತ್ಯವಿದೆ-ಬಿಜೆಪಿಯವರಿಗೆ ಆ ಸಂಖ್ಯಾಬಲ ಇಲ್ಲ-ಸತೀಶ್ ಜಾರಕಿಹೊಳಿ

ಬೆಳಗಾವಿ, ಜು.26-ಬಿಜೆಪಿ ಸರ್ಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲ ತಾಂತ್ರಿಕವಾಗಿ ಅವರಿಗೆ ಇಲ್ಲ. ಹಾಗಿದ್ದು ಯಾವ ಆಧಾರದ ಮೇಲೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆಗೆ 111 ಸೀಟುಗಳು ಅಗತ್ಯವಿದೆ. ಆದರೆ ಬಿಜೆಪಿಯವರಿಗೆ ಆ ಸಂಖ್ಯಾಬಲ ಇಲ್ಲ ಎಂದರು.

ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶ್‍ಕುಮಾರ್ ಅನರ್ಹ ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಮೊದಲೇ ಅತೃಪ್ತರನ್ನು ಅನರ್ಹಗೊಳಿಸಿದ್ದರೆ ಸರ್ಕಾರ ಉಳಿಯುತ್ತಿತ್ತು. ಉಳಿದ 13 ಮಂದಿಯನ್ನು ಅನರ್ಹಗೊಳಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಅತೃಪ್ತರನ್ನು ಸೇರಿಸಿಕೊಳ್ಳುವುದು ಹೈಕಮಾಂಡ್‍ಗೆ ಬಿಟ್ಟ ವಿಚಾರ. ನಾನು ಹಿರಿಯ ನಾಯಕರಿಗೆ ಆಪರೇಷನ್ ಕಮಲದ ಬಗ್ಗೆ ಎಚ್ಚರಿಕೆ ನೀಡಿದ್ದೆ. ಆದರೆ ಆಗ ಹೈಕಮಾಂಡ್ ಅದನ್ನು ಪರಿಗಣಿಸಿರಲಿಲ್ಲ. ಅದನ್ನು ಗಂಭೀರವಾಗಿ ಪರಿಗಣಿಸಿದ್ದರೆ ಸರ್ಕಾರ ಪತನವಾಗುತ್ತಿರಲಿಲ್ಲ. ನಾವು ಸೀರಿಯಸ್ ಆಪರೇಷನ್ ಮಾಡಲಿಲ್ಲ. ಕಾಂಗ್ರೆಸ್ ರಿವರ್ಸ್ ಆಪರೇಷನ್ ಮಾಡಿದ್ದರೆ ಸಕ್ಸಸ್ ಆಗುತ್ತಿತ್ತು ಎಂದರು.

ಸ್ಪೀಕರ್ ರಮೇಶ್ ಕುಮಾರ್ ಅವರು ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದಾರೆ. ಬಿಜೆಪಿಯವರಿಗೆ ಸ್ಪೀಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.

ಸರ್ಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣವಲ್ಲ:
ಸರ್ಕಾರ ಬೀಳಲು ಜಾರಕಿಹೊಳಿ ಕುಟುಂಬ ಕಾರಣ ಎಂದು ತಿಳಿದಿದ್ದಾರೆ. ಆದರೆ ಅದಕ್ಕೆ ಜಾರಕಿಹೊಳಿ ಕುಟುಂಬ ಕಾರಣವಲ್ಲ. ಒಂದು ವಸ್ತು ಕಾರಣ. ಅದನ್ನು ಸಮಯ ಬಂದಾಗ ಹೇಳುತ್ತೇನೆ. ಹೇಳಲೇ ಬೇಕು. ಇಲ್ಲದಿದ್ದರೆ ಇತಿಹಾಸದಲ್ಲಿ ಹಾಗೆಯೇ ಉಳಿಯುತ್ತದೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ