ಬೆಂಗಳೂರು; ಮೂರು ಜನ ಶಾಸಕರನ್ನು ಅನರ್ಹಗೊಳಿಸಿರುವ ನನ್ನ ತೀರ್ಮಾನ ಪಕ್ಷಪಾತದಿಂದ ಕೂಡಿದೆ ಎಂದು ಆರೋಪ ಮಾಡಲಾಗುತ್ತಿದೆ. ಆದರೆ, ಈ ಆರೋಪಕ್ಕೂ ನನಗೂ ಸಂಬಂಧ ಇಲ್ಲ. ಯಾರು ತೃಪ್ತರೋ ಯಾರು ಅತೃಪ್ತರೋ ಎಂಬ ವಿಚಾರದ ಕುರಿತು ನನಗೆ ಸಂಬಂಧ ಇಲ್ಲ, ದೂರು ಬಂದಾಗ ನ್ಯಾಯಾಧಿಕರಣ ಮಾಡೋ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ ಅಷ್ಟೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶಾಸಕರ ರಾಜೀನಾಮೆ ಕುರಿತು ಶುಕ್ರವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಹೇಳಿಕೆ ನೀಡಿರುವ ಸ್ಪೀಕರ್ ರಮೇಶ್ ಕುಮಾರ್, “ಒಂದೊಂದು ಪ್ರಕರಣವು ಒಂದೊಂದು ಸ್ವಭಾವ ಇದೆ. ಈ ಕುರಿತು ವಕೀಲರ ಜೊತೆ ಚರ್ಚೆ ನಡೆಸಬೇಕು. ದ್ವೇಷದಿಂದ ಆದೇಶ ಮಾಡಿದಂತೆ ಅಥವಾ ಮೊದಲೇ ತೀರ್ಮಾನ ಮಾಡಿದಂತೆ ಆಗಬಾರದು.
ನ್ಯಾಯಸಮ್ಮತವಾದ ಆದೇಶ ನೀಡಬೇಕು. ರಾಜೀನಾಮೆ ನೀಡಿರುವ ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಶಿಕ್ಷೆ ನೀಡಬೇಕ? ಅಥವಾ ರಾಜೀನಾಮೆ ಅಂಗೀಕಾರ ಮಾಡಬೇಕ? ಎಂದು ಆಲೋಚನೆ ಮಾಡಬೇಕು.
ಅಲ್ಲದೆ, ಇಂತಹ ಪ್ರಕರಣದಲ್ಲಿ ಈ ಹಿಂದೆ ಪಾರ್ಲಿಮೆಂಟ್ನಲ್ಲಿ ಏನಾಗಿದೆ? ಬೇರೆ ರಾಜ್ಯದಲ್ಲಿ ಏನಾಗಿದೆ? ನಮ್ಮದೇ ರಾಜ್ಯದಲ್ಲಿ ಏನು ತೀರ್ಮಾನ ಮಾಡಲಾಗಿದೆ? ಈ ಎಲ್ಲಾ ವಿಚಾರವನ್ನು ಪರಿಶೀಲಿಸಬೇಕು. ಹೀಗಾಗಿ ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ನಾಲ್ಕೈದು ದಿನ ಕಾಲಾವಕಾಶದ ಅವಶ್ಯಕತೆ ಇದೆ” ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮೂರು ಜನ ರೆಬೆಲ್ಸ್ ಶಾಸಕರನ್ನು ಅನರ್ಹತೆ ಮಾಡಿರುವ ತನ್ನ ತೀರ್ಮಾನದ ಕುರಿತು ಮಾತನಾಡಿದ ಅವರು, “ ಯಾರು ತೃಪ್ತರೋ ಯಾರು ಅತೃಪ್ತರೋ ನನಗೆ ಸಂಬಂಧ ಇಲ್ಲ. ದೂರು ಬಂದಾಗ ನ್ಯಾಧಿಕರಣ ಮಾಡುವ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ಯಾರನ್ನೂ ಮೆಚ್ಚಿಸುವ ಉದ್ದೇಶ ನನಗಿಲ್ಲ, ಸಂವಿಧಾನ ಬದ್ಧವಾಗಿ ಕೆಲಸ ನಿರ್ವಹಿಸಿದ್ದೇನೆ” ಎಂದು ತನ್ನ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.