ಬೆಂಗಳೂರು, ಜು.25-ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತಿಯ ಹೊಗೆ ಇನ್ನೂ ಹಬೆಯಾಡುತ್ತಿದ್ದು, ಆಪರೇಷನ್ ಕಮಲದ ಹಿಟ್ಲಿಸ್ಟ್ನಲ್ಲಿ ಐದಾರು ಮಂದಿ ಶಾಸಕರಿರುವ ಬಗ್ಗೆ ಗುಸು ಗುಸು ಕೇಳಿ ಬರುತ್ತಿದೆ.
ಆಪರೇಷನ್ ಕಮಲಕ್ಕೆ ಬಲಿಯಾಗಿ 15 ಮಂದಿ ಶಾಸಕರು ರಾಜೀನಾಮೆ ನೀಡಿದ್ದು, ಇನ್ನೂ ಮೂರು ಮಂದಿ ಬಿಜೆಪಿ ಸಂಪರ್ಕದಲ್ಲಿದ್ದೂ ಇಲ್ಲದಂತೆ ಸದನದಿಂದ ದೂರ ಉಳಿದು ಕಾಂಗ್ರೆಸ್ಗೆ ಪೆಟ್ಟು ನೀಡಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ರಚಿಸಲು ಅಗತ್ಯವಾದಷ್ಟು ಬಹುಮತವನ್ನು ಬಿಜೆಪಿ ವಿಧಾನಸಭೆಯಲ್ಲಿ ಹೊಂದಿದೆ.ಆದರೆ ರಾಜೀನಾಮೆ ನೀಡಿರುವ ಅತೃಪ್ತರ ಮೇಲೆ ಬಿಜೆಪಿಗರಿಗೆ ಸಂಪೂರ್ಣವಾದ ನಂಬಿಕೆ ಇಲ್ಲ.
ಸುಮಾರು 15 ಮಂದಿಯಲ್ಲಿ ಏಳೆಂಟು ಮಂದಿ ಅವಕಾಶವಾದಿ ರಾಜಕಾರಣಿಗಳಿದ್ದು, ಎಲ್ಲಿ ಲಾಭ ಸಿಗುತ್ತದೋ ಅಲ್ಲಿ ಜಾರಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ನಾಳೆ ಸರ್ಕಾರ ರಚನೆ ಮಾಡಿದರೂ ಇವರ ಕಾಟ ತಪ್ಪುವುದಿಲ್ಲ ಎನ್ನಲಾಗದು. ಹೀಗಾಗಿ ಮುನ್ನೆಚ್ಚರಿಕೆ ವಹಿಸಿರುವ ಬಿಜೆಪಿ ಕಾಂಗ್ರೆಸ್ನ ಇನ್ನೂ ಐದಾರು ಮಂದಿಗೆ ಗಾಳ ಹಾಕಿದ್ದು, ಸರ್ಕಾರ ರಚನೆ ಮಾಡಿದ ನಂತರ ತಮ್ಮೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದೆ ಎನ್ನಲಾಗಿದೆ.
ಕಾಂಗ್ರೆಸ್ನಲ್ಲಿ ಮೂಲೆಗುಂಪಾಗಿದ್ದ ಈ ಅತೃಪ್ತ ಶಾಸಕರು ಬಿಜೆಪಿಯ ಪ್ರಸ್ತಾವನೆಗೆ ಮೌಖಿಕ ಸಮ್ಮತಿ ಸೂಚಿಸಿದ್ದಾರೆ ಎಂಬ ಮಾತುಗಳಿವೆ. ಒಂದು ವೇಳೆ ನಿರೀಕ್ಷೆಯಂತೆ ಐದಾರು ಮಂದಿ ಶಾಸಕರು ಕಾಂಗ್ರೆಸ್ನಿಂದ ಹೊರಹೋದರೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ಬಲ 60ಕ್ಕೆ ಕುಸಿಯುವ ಸಾಧ್ಯತೆಗಳಿವೆ. ಪ್ರಸ್ತುತ ಸಂದರ್ಭದಲ್ಲಿ ಕೇಂದ್ರದಲ್ಲೂ ಬಿಜೆಪಿ ಸರ್ಕಾರ, ರಾಜ್ಯದಲ್ಲೂ ಬಿಜೆಪಿ ಸರ್ಕಾರವೇ ಇದ್ದರೆ ಚುನಾವಣೆ ಎದುರಿಸಿ ಕಾಂಗ್ರೆಸ್ನಿಂದ ಗೆಲ್ಲುವುದು ಕಷ್ಟಸಾಧ್ಯ. ಹಾಗಾಗಿ ಬಿಜೆಪಿ ಸೇರುವುದೇ ಸೂಕ್ತ ಎಂಬ ಅಭಿಪ್ರಾಯವನ್ನು ಕೆಲವು ಶಾಸಕರು ಹೊಂದಿದ್ದಾರೆ.
ಮೊದಲ ಹಂತದ ಆಪರೇಷನ್ ಕಮಲದಲ್ಲೇ ಬಿಜೆಪಿಯ ಪಟ್ಟಿಯಲ್ಲಿದ್ದ ಈ ಐದಾರು ಮಂದಿ ಶಾಸಕರು ಯಾವ ಕ್ಷಣದಲ್ಲಿ ಏನಾಗಲಿದೆಯೋ ಎಂಬ ಗೊಂದಲಗಳಿಂದ ಬಿಜೆಪಿ ನಾಯಕರ ಮಾತುಗಳನ್ನು ನಂಬದೆ ಎರಡೂ ಕಡೆಯಲ್ಲೂ ಅವಕಾಶಗಳಿಗಾಗಿ ಹುಡುಕಾಟ ನಡೆಸಿದರು. ಆದರೆ ಅತೃಪ್ತರಿಗಿಂತಲೂ ವೇಗವಾಗಿ ಕಾರ್ಯಾಚರಣೆ ನಡೆಸಿದ ಬಿಜೆಪಿ 15 ಮಂದಿಯನ್ನು ಕರೆದುಕೊಂಡುಹೋಯಿತು. ಹೀಗಾಗಿ ಹೆಚ್ಚುವರಿಯಾಗಿ ಬಿಜೆಪಿಗೆ ಸೇರಲು ಶಾಸಕರು ಮುಂದಾದರಾದರೂ ಅದಕ್ಕೆ ಸರಿಯಾದ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಪಕ್ಷದಿಂದ ಒಂದು ಕಾಲು ಹೊರಗಿಟ್ಟವರೂ ಅನಿವಾರ್ಯವಾಗಿ ಅಲ್ಲೇ ಉಳಿದುಕೊಳ್ಳುವ ಸ್ಥಿತಿ ಎದುರಾಯಿತು.
ಜಾಣರಾಗಿ ಮೊದಲೇ ಹೋಗಿ ಬಿಜೆಪಿ ಮಾತು ಕೇಳಿದವರು ಹಣ, ಅಧಿಕಾರದ ಎರಡೂ ಲಾಭ ಗಿಟ್ಟಿಸಿಕೊಂಡು ಖುಷಿಯಾಗಿರುವ ಸಂದರ್ಭ ಎದುರಾಗಿರುವಾಗ ಎಲ್ಲರಿಗಿಂತಲೂ ಮೊದಲೇ ಮಾತುಕತೆ ನಡೆಸಿದ ಈ ಐದಾರು ಮಂದಿ ಕೊನೆ ಕ್ಷಣದ ಹಿಂಜರಿಕೆಯಿಂದ ಕೈ ಕೈ ಹಿಸುಕಿಕೊಂಡು ಕುಳಿತಿದ್ದಾರೆ.
ಆದರೆ ಬಿಜೆಪಿಯವರ ಜೊತೆ ನಿರಂತರ ಸಂಪರ್ಕ ಮುಂದುವರೆಸಿದ್ದು, ಸರ್ಕಾರ ರಚನೆಯಾದರೆ ಕಾಂಗ್ರೆಸ್ಗೆ ಕೈ ಕೊಟ್ಟು ಗೋಡೆ ಹಾರಲು ಸಿದ್ಧರಿದ್ದಾರೆ ಎಂದು ಹೇಳಲಾಗುತ್ತಿದೆ.