ಬಿಜೆಪಿ ನಿಲುವುಗಳಿಂದ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಗೊಂದಲಗಳ ಸೃಷ್ಟಿ

ಬೆಂಗಳೂರು, ಜು.25-ಸಮ್ಮಿಶ್ರ ಸರ್ಕಾರ ಪತನವಾದ ಬೆನ್ನಲ್ಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಬಹುದು, ಯಡಿಯೂರಪ್ಪ ಮುಖ್ಯಮಂತ್ರಿಯಾಗೇ ಬಿಟ್ಟರು ಎಂಬ ನಿರೀಕ್ಷೇಗಳು ಏರುಪೇರಾಗಿ ಬಿಜೆಪಿ ನಿಲುವುಗಳು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸಿರುವ ನಡುವೆಯೇ ವಿಪಕ್ಷಗಳಲ್ಲಿ ಮತ್ತೆ ಅಧಿಕಾರದ ಆಸೆ ಚಿಗುರಿಸಿದೆ.

ವಿಶ್ವಾಸ ಮತ ಯಾಚನೆಯಲ್ಲಿ ಸೋಲು ಕಂಡ ಬಳಿಕ ಒಂದು ದಿನ ತಟಸ್ಥವಾಗಿ ಉಳಿದು, ತಮ್ಮ ಪಾಡಿಗೆ ತಾವು ಪಕ್ಷಗಳ ಆಂತರಿಕ ಸಭೆಗಳನ್ನು ನಡೆಸಿಕೊಂಡಿದ್ದ ಜೆಡಿಎಸ್-ಕಾಂಗ್ರೆಸ್ ನಾಯಕರು ಇಂದು ಮತ್ತೆ ಚುರುಕಾಗಿದ್ದಾರೆ. ವಿಪಕ್ಷಗಳ ಅಂಗಳಕ್ಕೆ ತಲುಪಿರುವ ಮಾಹಿತಿ ಪ್ರಕಾರ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚಿಸಲು ಹಿಂದೇಟು ಹಾಕುತ್ತಿದೆ. ಈಗಾಗಲೇ ಯಡಿಯೂರಪ್ಪ ಅವರಿಗೆ 77 ವರ್ಷವಾಗಿದ್ದು, ಅವರನ್ನು ಮುಖ್ಯಮಂತ್ರಿ ಮಾಡಿದರೆ ದೇಶಾದ್ಯಂತ 75 ವರ್ಷ ದಾಟಿದ ಹಿರಿಯ ನಾಯಕರು ತಮಗೂ ಅಧಿಕಾರ ಬೇಕು ಎಂದು ಹೊಸ ಬೇಡಿಕೆ ಮುಂದಿಡುವ ಸಾಧ್ಯತೆ ಇದೆ. ಅಲ್ಲದೆ ಈ ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಾದ ಕೆಲವು ಪ್ರಕರಣಗಳಿಂದ ಬಿಜೆಪಿ ಹೈಕಮಾಂಡ್ ಗೊಂದಲದಲ್ಲಿದೆ ಎಂದು ಹೇಳಲಾಗುತ್ತಿದೆ.

ಜೊತೆಗೆ 15 ಮಂದಿ ಅತೃಪ್ತ ಶಾಸಕರು ತಮ್ಮ ಪಾಡಿಗೆ ತಾವು ಹೊರಗಿದ್ದೇ ವಿಶ್ವಾಸ ಮತಕ್ಕೆ ಗೈರು ಹಾಜರಾದ 5 ಮಂದಿ ಕಾಂಗ್ರೆಸ್ ಶಾಸಕರು ಸೇರಿ ಒಟ್ಟು 20 ಮಂದಿ ಪಕ್ಷ ನಿಷ್ಠೆ ಮೀರಿ ಸ್ವಾರ್ಥ ರಾಜಕಾರಣದ ಬೇಳೆ ಬೇಯಿಸಿಕೊಳ್ಳುವ ಸ್ವಭಾವದವರಾಗಿದ್ದು, ಅವರನ್ನು ನಂಬಿ ಸರ್ಕಾರ ರಚನೆ ಮಾಡುವುದು ಕಷ್ಟ ಎಂದು ಬಿಜೆಪಿ ಪಾಳಯ ಆತಂಕದಲ್ಲಿದೆ. ಹೀಗಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ ಮತ್ತೊಮ್ಮೆ ನೇರವಾಗಿ ಚುನಾವಣೆ ಎದುರಿಸುವ ಚಿಂತನೆ ನಡೆದಿದೆ ಎಂಬ ವದಂತಿಗಳು ಕಾಂಗ್ರೆಸ್-ಜೆಡಿಎಸ್ ಪಕ್ಷಗಳನ್ನು ಮೈಕೊಡವಿ ನಿಲ್ಲುವಂತೆ ಮಾಡಿದೆ.

ಒಂದು ವೇಳೆ ಬಿಜೆಪಿ ಹೈಕಮಾಂಡ್ ಸರ್ಕಾರ ರಚನೆಗೆ ಸಮ್ಮತಿಸದೆ ಇದ್ದರೆ ಈಗ ಕಾಂಗ್ರೆಸ್-ಜೆಡಿಎಸ್‍ನಲ್ಲಿ ಗೈರು ಹಾಜರಾಗಿರುವ ಶಾಸಕರು ಅತಂತ್ರ ಸ್ಥಿತಿಗೆ ತಲುಪಲಿದ್ದಾರೆ. ಬಿಜೆಪಿಯಲ್ಲೇ ಬಹಳಷ್ಟು ಮಂದಿ ಶಾಸಕರು ಬಂಡಾಯವೆದ್ದು ರಾಜಕೀಯ ನಿರ್ಧಾರಗಳನ್ನು ಪುನರ್ ವಿಮರ್ಶಿಸುವ ಸಾಧ್ಯತೆ ಇದೆ. ಅಂತಹ ಒಂದು ಸಂದರ್ಭ ಎದುರಾದರೆ ಎರಡನೇ ಇನ್ನಿಂಗ್ಸ್ ಆಟ ಆಡಲು ದೋಸ್ತಿಗಳು ತೆರೆಮರೆಯ ಕಸರತ್ತು ನಡೆಸಿದ್ದಾರೆ.

ಹೋಗುವವರೆಲ್ಲ ಹೋಗಲಿ ಎಂದು ನಿನ್ನೆಯವರೆಗೂ ಬೇಸರದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರು ಇಂದು ಬೆಳಗ್ಗೆ ಏಕಾಏಕಿ ಚುರುಕಾಗಿದ್ದು, ಅಲ್ಪಸ್ವಲ್ಪ ಅಸಮಾಧಾನದಲ್ಲಿ ಡೋಲಾಯಮಾ£ ಸ್ಥಿತಿಯಲ್ಲಿರುವ ಶಾಸಕರೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ.

ರಾಜಕೀಯ ಯಾವ ತಿರುವನ್ನಾದರೂ ಪಡೆದುಕೊಳ್ಳಬಹುದು, ದುಡುಕಬೇಡಿ. ತಾಳ್ಮೆಯಿಂದಿರಿ ಎಂದು ಶಾಸಕರಿಗೆ ಹಿತವಚನ ಹೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಒಂದು ವೇಳೆ ಬಿಜೆಪಿ ಹೈಕಮಾಂಡ್ ಸರ್ಕಾರ ರಚನೆಗೆ ಸಮ್ಮತಿಸಿದ್ದೇ ಆದರೆ ಕಾಂಗ್ರೆಸ್-ಜೆಡಿಎಸ್ ಪಾಳಯದಲ್ಲಿ ಚಿಗುರೊಡೆದಿರುವ ಆಸೆ ಕಮರಿಹೋಗಲಿದ್ದು, ಯಥಾಸ್ಥಿತಿಯಂತೆ ಪಕ್ಷ ಸಂಘಟನೆ, ಚುನಾವಣೆ ತಯಾರಿಯತ್ತ ಗಮನ ಹರಿಸಬೇಕಾಗುತ್ತದೆ. ರಾಷ್ಟ್ರಪತಿ ಆಳ್ವಿಕೆ ಗುಮ್ಮ ಎದುರಾದರೆ ಮತ್ತೆ ಸರ್ಕಾರ ರಚನೆಯ ಸಾಧ್ಯತೆಗಳ ಬಗ್ಗೆ ದೋಸ್ತಿ ಪಕ್ಷಗಳು ಮರು ಪ್ರಯತ್ನ ನಡೆಸಲು ಮುಂದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ