ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಅತೃಪ್ತ ಶಾಸಕ ಶಿವರಾಮ ಹೆಬ್ಬಾರ್ ಸ್ಪಷ್ಟನೆ!

ಬೆಂಗಳೂರು; ಮೈತ್ರಿ ಪಕ್ಷದ ಅತೃಪ್ತ ಶಾಸಕರ ನಿರ್ಧಾರ ಅಚಲವಾಗಿದೆ, ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆದು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹಿಂದಿರುಗುವ ಪ್ರಶ್ನೆಯೇ ಇಲ್ಲ ಎಂದು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಂ ಹೆಬ್ಬಾರ್ ನ್ಯೂಸ್18 ಕನ್ನಡಕ್ಕೆ ಸ್ಪಷ್ಟಪಡಿಸಿದ್ದಾರೆ.

ಕಳೆದ ಜುಲೈ.6 ರಂದು ಸಾಮೂಹಿಕ ರಾಜೀನಾಮೆ ನೀಡಿ ಮುಂಬೈಗೆ ತೆರಳಿದ ಅತೃಪ್ತ ಶಾಸಕರು ಕೊನೆಗೂ ಮೈತ್ರಿ ಸರ್ಕಾರವನ್ನು ಬೀಳಿಸುವಲ್ಲಿ ಸಫಲರಾಗಿದ್ದರು. ಆದರೆ, ಸರ್ಕಾರ ಬಿದ್ದ ಮರುದಿನವೇ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಕ್ಷೇತ್ರದ ಜನರನ್ನು ಹಾಗೂ ಕುಟುಂಬದ ಸದಸ್ಯರನ್ನು ನೋಡುವ ನೆಪವೊಡ್ಡಿ ಬುಧವಾರ ಮುಂಬೈ ತೊರೆದು ಯಲ್ಲಾಪುರಕ್ಕೆ ಆಗಮಿಸಿದ್ದಾರೆ.

ಶಾಸಕ ಶಿವರಾಂ ಹೆಬ್ಬಾರ್ ಅವರ ಈ ನಡೆ ಸಾಮಾನ್ಯವಾಗಿ ಅತೃಪ್ತರ ಆತಂಕಕ್ಕೆ ಕಾರಣವಾಗಿತ್ತು. ಅಕಸ್ಮಾತ್ ಸನರ್ಹತೆಗೆ ಹೆದರಿ ಶಿವರಾಂ ಮತ್ತೆ ಕಾಂಗ್ರೆಸ್ ಜೊತೆ ಕೈಜೋಡಿಸಿದರೆ ತಮ್ಮ ಕಥೆ ಏನು? ಎಂಬ ಪ್ರಶ್ನೆಯೂ ಎದ್ದಿತ್ತು. ಆದರೆ, ಇದಕ್ಕೆ ನ್ಯೂಸ್ 18 ಮೂಲಕ ಉತ್ತರ ನೀಡಿರುವ ಶಿವರಾಂ ಹೆಬ್ಬಾರ್, “ನಾನು ಇಷ್ಟು ದಿನ ಕ್ಷೇತ್ರದಿಂದ ಹೊರಗುಳಿದಿದ್ದಕ್ಕೆ ಮೊದಲು ಕ್ಷೇತ್ರದ ಜನರ ಕ್ಷಮೆ ಕೇಳುತ್ತೇನೆ. ಕುಟುಂಬ ಹಾಗೂ ಕ್ಷೇತ್ರದ ಜನರನ್ನು ನೋಡುವ ಮನಸ್ಸಾಗಿತ್ತು ಹೀಗಾಗಿಯೇ ಬಂದಿದ್ದೇನೆ.

ಎಷ್ಟು ದಿನ ಹೀಗೆ ಮುಂಬೈನಲ್ಲಿ ಇರಲು ಸಾಧ್ಯ? ಒಂದಲ್ಲಾ ಒಂದು ದಿನ ಕ್ಷೇತ್ರಕ್ಕೆ ಬರಲೇಬೇಕು. ಹೀಗಾಗಿ ಈಗಲೇ ಬಂದಿದ್ದೇನೆ ಮತ್ತೆ ವಾಪಸ್ ಹೋಗಲಾರೆ. ಇನ್ನೂ ಕ್ಷೇತ್ರಕ್ಕೆ ಆಗಮಿಸಿದಾಕ್ಷಣ ಮತ್ತೆ ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ತಿಳಿಯುವ ಅಗತ್ಯವೂ ಇಲ್ಲ. ನಮ್ಮ ರಾಜೀನಾಮೆ ನಿರ್ಧಾರ ಅಚಲವಾಗಿದೆ ಹಾಗೂ ಎಲ್ಲಾ ಅತೃಪ್ತ ಶಾಸಕರಲ್ಲೂ ಒಂದು ಸ್ಪಷ್ಟತೆ ಇದೆ. ಹೀಗಾಗಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹಿಂದಿರುಗುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನೂ ಅತೃಪ್ತರು ಬಿಜೆಪಿಯಿಂದ ಕೋಟಿ ಕೋಟಿ ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ರಾಜಕೀಯಕ್ಕೆ ಬರುವ ಮುಂಚೆಯೇ ಕೋಟಿಯನ್ನು ಕಂಡಿದ್ದೇವೆ. ಎಂಟಿಬಿ ನಾಗರಾಜ್ ಅವರು ತಮ್ಮ ಹೆಸರಿನಲ್ಲಿ ಸಾವಿರಾರು ಕೋಟಿ ಆಸ್ತಿ ಇದೆ ಎಂದು ಈಗಾಗಲೇ ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ. ಹೀಗಿದ್ದ ಮೇಲೆ ಈ 40-50 ಕೋಟಿಗೆ ಆಸೆ ಬೀಳುವ ಅಗತ್ಯ ಏನಿದೆ? ಎಂದು ಪ್ರಶ್ನೆ ಮಾಡುವ ಮೂಲಕ ಅತೃಪ್ತ ಶಾಸಕರು ಯಾರು ಸಹ ಆಪರೇಷನ್ ಕಮಲದ ಮೂಲಕ ಹಣ ಪಡೆದಿಲ್ಲ” ಎಂದು ತಿಳಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ