ಆಪರೇಷನ್​ ಹಸ್ತ?; ಮುಂಬೈನಲ್ಲಿ ಪ್ರತ್ಯಕ್ಷರಾದ ದಿನೇಶ್ ಗುಂಡೂರಾವ್, ಅತೃಪ್ತರಿಗೆ ಢವಢವ!

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರವೇ ಪತನವಾಗಿದೆ. ಇದರಿಂದ ಕೋಪಗೊಂಡಿರುವ ಕಾಂಗ್ರೆಸ್ನಾಯಕ ಸಿದ್ದರಾಮಯ್ಯ, ನಮಗೆ ದ್ರೋಹ ಮಾಡಿರುವ ಅತೃಪ್ತ ಶಾಸಕರನ್ನು ಪ್ರಳಯವಾದರೂ ಮತ್ತೆ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದರು. ಆದರೆ, ಇದೀಗ ಸರ್ಕಾರ ರಚನೆಗೆ ಮುಂದಾಗಿರುವ ಬಿಜೆಪಿಯ ಬಹುಮತ ಸಾಬೀತಿಗೆ ಅತೃಪ್ತ ಶಾಸಕರ ಸಹಾಯ ಬೇಕೇಬೇಕು. ಹೀಗಾಗಿ ಕಾಂಗ್ರೆಸ್ನಾಯಕರು ಅತೃಪ್ತರನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದಾರಾ? ಹೀಗೊಂದು ಅನುಮಾನ ಹುಟ್ಟಿಕೊಂಡಿದೆ

ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸಲಿದೆಯೋ ಇಲ್ಲವೋ ಎಂಬುದು ಈಗಾಗಲೇ ರಾಜೀನಾಮೆ ನೀಡಿರುವ ಜೆಡಿಎಸ್​- ಕಾಂಗ್ರೆಸ್​ ಶಾಸಕರ ಮೇಲೆ ನಿರ್ಧರಿತವಾಗಿದೆ. ಇದರಿಂದಾಗಿ ತಮ್ಮ ಪಕ್ಷದ ಶಾಸಕರ ಮನವೊಲಿಸಲು ಕಾಂಗ್ರೆಸ್​ ಮುಂದಾಗುವ ಮೂಲಕ ಬಿಜೆಪಿಯ ಅಧಿಕಾರಕ್ಕೆ ಆಸೆಗೆ ತಣ್ಣೀರೆರಚಲು ತಂತ್ರ ರೂಪಿಸಿದೆಯಾ? ಈಗಾಗಲೇ ಅತೃಪ್ತ ಶಾಸಕರಿಗೆ ಭಯ ಶುರುವಾಗಿದ್ದು, ನಿನ್ನೆ ಇದ್ದಕ್ಕಿದ್ದಂತೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್  ಮುಂಬೈನಿಂದ ತಮ್ಮ ಊರಿಗೆ ಬಂದಿದ್ದರು.

ಇದೀಗ  ಸದ್ದಿಲ್ಲದೆ ಮುಂಬೈಗೆ ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ನಡೆಯೂ ಕುತೂಹಲಕ್ಕೆ ಕಾರಣವಾಗಿದೆ. ಮುನ್ಸೂಚನೆ ನೀಡದೇ ಮುಂಬೈಗೆ ಬಂದ ದಿನೇಶ್ ಗುಂಡೂರಾವ್ ಆಗಮನದಿಂದ ಅತೃಪ್ತ ಶಾಸಕರು ಮತ್ತಷ್ಟು ಆತಂಕಗೊಂಡಿದ್ದಾರೆ. ಆಪರೇಷನ್​ ಕಮಲಕ್ಕೆ ಪ್ರತಿಯಾಗಿ ಆಪರೇಷನ್ ಹಸ್ತ ನಡೆಸಲು ಕಾಂಗ್ರೆಸ್​ ಸಜ್ಜಾಗಿದೆಯಾ? ಎಂಬ ಅನುಮಾನವೂ ಹುಟ್ಟಿಕೊಂಡಿದೆ.

ಕಳೆದ ಬಾರಿ ಮುಂಬೈಗೆ ಬರುವುದಾಗಿ ತಿಳಿಸಿ ಬಂದಿದ್ದ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಹೋಟೆಲ್ ಒಳಗೆ ಬಿಡದೆ ದೊಡ್ಡ ಹೈಡ್ರಾಮಾ ನಡೆದಿತ್ತು. ಹೀಗಾಗಿ, ಈ ಬಾರಿ ಯಾರಿಗೂ ತಿಳಿಸದೆ ದಿಢೀರ್ ಎಂದು ಮುಂಬೈನಲ್ಲಿ ದಿನೇಶ್ ಗುಂಡೂರಾವ್ ಪ್ರತ್ಯಕ್ಷರಾಗಿದ್ದಾರೆ. ಅತೃಪ್ತ ಶಾಸಕರನ್ನು ಭೇಟಿಯಾಗಿ ಮನವೊಲಿಸಲು ದಿನೇಶ್ ಮುಂದಾಗಿರಬಹುದು ಎನ್ನಲಾಗುತ್ತಿದೆ.

ಇನ್ನೊಂದೆಡೆ ಬಿಜೆಪಿ ತಂಡ ಕೂಡ ಮುಂಬೈಗೆ ಪ್ರಯಾಣ ಬೆಳೆಸಿದೆ. ಶಾಸಕರಾದ ಆರ್. ಅಶೋಕ್, ಸತೀಶ ರೆಡ್ಡಿ, ಅಶ್ವತ್ಥನಾರಾಯಣ ಮುಂಬೈಗೆ ಭೇಟಿ ನೀಡಿದ್ದಾರೆ. ಅತೃಪ್ತರ ಜೊತೆ ಮುಂದಿನ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಲು ಆಗಮಿಸಿರುವ ಸಾಧ್ಯತೆಯಿದೆ.  ಪಕ್ಷದಲ್ಲಿ ಹಾಗೂ ಮುಂದಿನ ಬಿಜೆಪಿ ಸರ್ಕಾರದಲ್ಲಿ ಉತ್ತಮ ಸ್ಥಾನಮಾನ ನೀಡೋ ಬಗ್ಗೆ ಸಂದೇಶ ಹೊತ್ತು ತಂದಿರುವ ಸಾಧ್ಯತೆಯೂ ಇದೆ. ವಿಶ್ವಾಸ ಮತಯಾಚನೆ ವೇಳೆ ಅತೃಪ್ತರು ಕೈ ಕೊಟ್ಟರೆ ಹೇಗೆ ಅನ್ನೋ ಆತಂಕದಿಂದ ಬಿಜೆಪಿ ತಂಡ ಮುಂಬೈಗೆ ಬಂದಿಳಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ