ಇಂದಿಲ್ಲ ಬಿಎಸ್​ವೈ ಪ್ರಮಾಣವಚನ; ಬಿಜೆಪಿಗೆ ಕಗ್ಗಂಟಾದ ಸರ್ಕಾರ ರಚನೆ ಕಸರತ್ತು

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸತತ 18 ದಿನಗಳ ಕಾಲ ನಡೆದ ನಾಟಕೀಯ ಬೆಳವಣಿಗೆಗೆ ಮಂಗಳವಾರ ತೆರೆ ಬಿದ್ದಿದೆ. ವಿಶ್ವಾಸಮತ ಸಾಬೀತು ಮಾಡಲು ಕಾಂಗ್ರೆಸ್​-ಜೆಡಿಎಸ್​​ ಮೈತ್ರಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ರಚನೆಗೆ ಉತ್ಸಾಹ ತೋರಿಸುತ್ತಿದೆ. ಆದರೆ ಇದು ಅಷ್ಟು ಸುಲಭವಲ್ಲ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ.

ಮೈತ್ರಿ ಪಾಳೆಯದ 15 ಬಂಡಾಯ ಶಾಸಕರು ಸ್ಪೀಕರ್​ಗೆ ರಾಜೀನಾಮೆ ನೀಡಿದ್ದಾರೆ. ಈ ವಿಚಾರ ಇನ್ನೂ ಇತ್ಯರ್ಥಗೊಂಡಿಲ್ಲ. ಹಾಗಾಗಿ, ಬಂಡಾಯ ಶಾಸಕರ ರಾಜೀನಾಮೆ ವಿಚಾರಕ್ಕೆ ತೆರ ಬೀಳದೇ ಹೊಸ ಸರ್ಕಾರ ರಚನೆ ಮಾಡಲು ಬಿಜೆಪಿಗೆ ರಾಜ್ಯಪಾಲರು ಆಹ್ವಾನ ನೀಡುವುದು ಅನುಮಾನ ಎನ್ನಲಾಗಿದೆ. ಹಾಗಾಗಿ, ಅತೃಪ್ತ ಶಾಸಕರ ರಾಜೀನಾಮೆ ವಿಚಾರ ಪೂರ್ಣಗೊಂಡ ನಂತರದಲ್ಲಿ ಹೊಸ ಸರ್ಕಾರ ರಚನೆಗೆ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆ ಇದೆ.

ವಿಧಾನಸಭೆಯ ಬಲ ಈಗಲೂ 224. ಮ್ಯಾಜಿಕ್ ಸಂಖ್ಯೆ 113. ಬಿಜೆಪಿ ಸದಸ್ಯ ಬಲ 105 ಮಾತ್ರ. ಈ ಹಿಂದೆ ಒಂದು ಬಾರಿ ಸರ್ಕಾರ ರಚನೆಗೆ ಬಿಎಸ್​​ವೈಗೆ ರಾಜ್ಯಪಾಲರು ಅವಕಾಶ ನೀಡಿದ್ದರು. ಆಗ ಬಿಜೆಪಿ ಪರವಾಗಿದ್ದಿದ್ದು 105 ಶಾಸಕರು. ಮಂಗಳವಾರ ಮೈತ್ರಿ ಸರ್ಕಾರ ವಿಶ್ವಾಸಮತ ಮಂಡಿಸಿದಾಗ ಬಿಜೆಪಿಗೆ ಬಿದ್ದಿದ್ದು 105 ಮತಗಳು. ಎರಡನ್ನೂ ಹೋಲಿಕೆ ಮಾಡಿ ನೋಡಿದರೆ ಬಿಜೆಪಿ ಸದಸ್ಯ ಬಲ ಬದಲಾಗಿಲ್ಲ ಎಂಬುದು ಸಾಬೀತಾಗುತ್ತದೆ. ಹಾಗಾಗಿ ಮತ್ತೆ ಸರ್ಕಾರ ರಚನೆಗೆ ಬಿಜೆಪಿಯನ್ನು ಆಹ್ವಾನಿಸಿದರೆ ದೋಸ್ತಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಲಿರುವ  ಸಾಧ್ಯತೆ ಇದೆ.
ಕೈಗೆ ಬಂದ ತುತ್ತು ಬಾಯಿಗೆ ಬರದಿದ್ದರೆ ಎನ್ನುವ ಆತಂಕ ಬಿಜೆಪಿಗೆ ಕಾಡಿದೆ. ಸರ್ಕಾರ ರಚನೆ ವಿಚಾರವಾಗಿ ಹೈಕಮಾಂಡ್​​ನಿಂದ ಗ್ರೀನ್​ ಸಿಗ್ನಲ್​ ಬಂದಿಲ್ಲ. ಈ ನಡೆ ಬಗ್ಗೆ ಯಡಿಯೂರಪ್ಪ ಅಸಮಾಧಾನಗೊಂಡಿದ್ದಾರೆ.

ಮೂಲಗಳ ಪ್ರಕಾರ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥಕ್ಕಾಗಿ ಬಿಜೆಪಿ ಹೈಕಮಾಂಡ್ ಕಾಯುತ್ತಿದ್ದಾರಂತೆ. ಹಾಗಾಗಿ, ನಿನ್ನೆ ನಡೆಯಬೇಕಿದ್ದ ಪಕ್ಷದ ಸಂಸದೀಯ ಮಂಡಳಿ ಸಭೆಯನ್ನು ಮುಂದೂಡಲಾಗಿತ್ತು ಎನ್ನಲಾಗಿದೆ.
ಸಂಸದೀಯ ಮಂಡಳಿ ಸಭೆಗೆ ಆಹ್ವಾನ ನೀಡುತ್ತಾರೆ ಎನ್ನುವ ವಿಶ್ವಾದಲ್ಲಿ ಯಡಿಯೂರಪ್ಪ ಇದ್ದರು. ಆದರೆ, ಹೈಕಮಾಂಡ್​ನಿಂದ ಕರೆ ಬಾರದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದ ನಿಯೋಗವನ್ನು ಬಿಎಸ್​​ವೈ ದೆಹಲಿಗೆ ಕಳುಹಿಸಿದ್ದಾರೆ. ಸರ್ಕಾರ ರಚನೆಗೆ ತೊಂದರೆ ಇಲ್ಲ ಎಂದು ಈ ನಿಯೋಗ ಅಮಿತ್​ ಷಾಗೆ ಮನವರಿಕೆ ಮಾಡಿಕೊಡಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ