ಕಾದು ನೋಡುವ ನಿರ್ಧಾರಕ್ಕೆ ಜೆಡಿಎಸ್

ಬೆಂಗಳೂರು, ಜು.25-ಮೈತ್ರಿ ಸರ್ಕಾರ ಪತನವಾದ ನಂತರ ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಕಾದು ನೋಡುವ ನಿರ್ಧಾರಕ್ಕೆ ಜೆಡಿಎಸ್ ಬಂದಿದೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ವಿಶ್ವಾಸ ಮತ ಕಳೆದುಕೊಂಡು ಎರಡು ದಿನ ಕಳೆದರೂ ಪರ್ಯಾಯ ಸರ್ಕಾರ ರಚನೆಯಾಗಿಲ್ಲ. ಸರ್ಕಾರ ರಚನೆಯ ಉತ್ಸಾಹದಲ್ಲಿರುವ ಬಿಜೆಪಿ ಕೂಡ ಇನ್ನು ಸರ್ಕಾರ ರಚನೆಗೆ ಮುಂದಾಗಿಲ್ಲ.

ರಾಜ್ಯ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಜೆಡಿಎಸ್ ಉದ್ದೇಶಿಸಿದೆ. ರಾಜೀನಾಮೆ ನೀಡಿರುವ ಶಾಸಕರ ವಿಚಾರದಲ್ಲಿ ಸುಪ್ರೀಂಕೋರ್ಟ್ ಇನ್ನೂ ಅಂತಿಮ ತೀರ್ಪು ನೀಡಿಲ್ಲ. ವಿಧಾನಸಭಾಧ್ಯಕ್ಷರು ಕೂಡ ರಾಜೀನಾಮೆ ನೀಡಿರುವ ಶಾಸಕರ ವಿಚಾರದಲ್ಲಿ ತೀರ್ಪು ಪ್ರಕಟಿಸಿಲ್ಲ. ಹೀಗಾಗಿ ಪರಿಸ್ಥಿತಿಗನುಗುಣವಾಗಿ ಕಾರ್ಯತಂತ್ರ ರೂಪಿಸುವುದು, ಜೊತೆಗೆ ಪಕ್ಷ ಸಂಘಟನೆಯನ್ನು ಮಾಡಲು ನಿರ್ಧರಿಸಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಕಾಂಗ್ರೆಸ್-ಜೆಡಿಎಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರೂ ಕೂಡ ಸಭಾಧ್ಯಕ್ಷರು ಕೈಗೊಳ್ಳುವ ತೀರ್ಮಾನವನ್ನೇ ಎದುರು ನೋಡುತ್ತಿದ್ದಾರೆ.

ಸರ್ಕಾರ ರಚನೆ ಉತ್ಸಾಹದಲ್ಲಿರುವ ಬಿಜೆಪಿ ಯಾವ ರೀತಿ ಸರ್ಕಾರ ರಚನೆ ಮಾಡಿ ಆಡಳಿತ ನಡೆಸುತ್ತದೋ ಕಾದು ನೋಡೋಣ. ಈಗಿನ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಸುಗಮವಾಗಿ ಆಡಳಿತ ನಡೆಸುವುದು ಬಿಜೆಪಿಗೆ ಸುಲಭವಲ್ಲ. ಪಕ್ಷ ಸಂಘಟನೆಗೆ ಈಗಿನಿಂದಲೇ ಹೆಚ್ಚು ಒತ್ತು ಕೊಟ್ಟರೆ ಮುಂದೆ ಅನುಕೂಲವಾಗಲಿದೆ ಎಂಬ ಕಿವಿಮಾತನ್ನು ಪಕ್ಷದ ವರಿಷ್ಠರು ಶಾಸಕರಿಗೆ ನೀಡಿದ್ದಾರೆ.

ಎಲ್ಲಾ ಶಾಸಕರು ಈಗಿನಂತೆಯೇ ಮುಂದೆಯೂ ಒಗ್ಗಟ್ಟನ್ನು ಕಾಪಾಡಿಕೊಂಡು ಹೋಗಬೇಕು. ಮೈತ್ರಿ ಸರ್ಕಾರ ಪತನವಾಯಿತು ಎಂದು ಧೈರ್ಯ ಕಳೆದುಕೊಳ್ಳುವುದು ಬೇಡ. ರಾಜಕೀಯದಲ್ಲಿ ಇಂತಹ ಏರಿಳಿತಗಳು ಸಹಜ. ರಾಜಕೀಯದಲ್ಲಾಗುವ ಬದಲಾವಣೆಗಳನ್ನು ಗಮನಿಸಿದರೆ ಮುಂದೆ ಏನು ಬೇಕಾದರೂ ಆಗಬಹುದು.ಹೀಗಾಗಿ ಕೆಲ ಕಾಲ ತಾಳ್ಮೆಯಿಂದ ಕಾದುನೋಡೋಣ ಎಂಬ ಸಲಹೆಯನ್ನು ಪಕ್ಷದ ನಾಯಕರು ಶಾಸಕರಿಗೆ ನೀಡಿದ್ದಾರೆ ಎಂದು ಮೂಲಗಳೂ ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ