ಜೆಡಿಎಸ್‌ ಕಟ್ಟಲು ರಾಜ್ಯ ವಿಭಜನೆ ತಂತ್ರ: ಎಚ್ ಡಿಡಿ ವಿರುದ್ಧ ಬಿಎಸ್ ವೈ ಆಕ್ರೋಶ

ಬೆಂಗಳೂರುಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿವಾದದ ಬಗ್ಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ಯಡಿಯೂರಪ್ಪ, ರಾಜ್ಯವನ್ನು ಪ್ರತ್ಯೇಕಿಸುವ ಮೂಲಕ ದೇವೇಗೌಡರು ಜೆಡಿಎಸ್‌ ಬಲಪಡಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು,‘‘ ಪ್ರತ್ಯೇಕ ರಾಜ್ಯದ ಕೂಗು ಈ ಹಿಂದೆ ಇಷ್ಟೊಂದು ವ್ಯಾಪಕವಾಗಿ ಕೇಳಿ ಬಂದಿರಲಿಲ್ಲ. ಆದರೆ ಉತ್ತರ ಕರ್ನಾಟಕದ ಜನರು ಜಾತಿ ಹಾಗೂ ಹಣದಾಸೆಗೆ ನನಗೆ ಮತ ಹಾಕಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಧಿಮಾಕಿನ ಹೇಳಿಕೆ ನೀಡಿದ ಬಳಿಕ ಪ್ರತ್ಯೇಕತೆಯ ಹೋರಾಟ ತೀವ್ರಗೊಂಡಿದೆ. ಈ ವಿಚಾರದಲ್ಲಿ ದೇವೇಗೌಡರು ಏಕೆ ಸುಮ್ಮನಿದ್ದಾರೆ ? ನಿಮ್ಮ ಮಗ ಈ ಬಗ್ಗೆ ನಿಮ್ಮ ಜತೆ ಚರ್ಚಿಸಿಯೇ ಹೇಳಿಕೆ ನೀಡಿದ್ದಾರಾ,’’ ಎಂದು ಪ್ರಶ್ನಿಸಿದ್ದಾರೆ.
ದೇವೇಗೌಡರ ಹುನ್ನಾರವನ್ನು ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಹಿಂದೆ ವೀರಶೈವ-ಲಿಂಗಾಯತರನ್ನು ಪ್ರತ್ಯೇಕಿಸುವ ಪ್ರಯತ್ನಕ್ಕೆ ಕಾಂಗ್ರೆಸ್‌ ಮುಂದಾಗಿತ್ತು. ಈಗ ಜೆಡಿಎಸ್‌ ಇದೇ ಹಾದಿಯಲ್ಲಿ ಮುನ್ನಡೆಯುತ್ತಿದ್ದು, ಜನರು ತಕ್ಕ ಪಾಠ ಕಲಿಸುತ್ತಾರೆ. ಅಖಂಡ ಕರ್ನಾಟಕಕ್ಕಾಗಿ ಹಲವು ಮಹನೀಯರು ರಕ್ತ ಹರಿಸಿದ್ದು, ಕುಮಾರಸ್ವಾಮಿಯವರು ವೈಯಕ್ತಿಕ ಲಾಭಕ್ಕಾಗಿ ಏಕೀಕೃತ ಕರ್ನಾಟಕ ಒಡೆಯಲು ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಿನಿಂದ ಸಂಗ್ರಹವಾಗುವ ಹಣದಲ್ಲಿ ಶೇ.60ರಷ್ಟನ್ನು ಉತ್ತರ ಕರ್ನಾಟಕದ ಅಭಿವೃದ್ಧಿಗೆ ನೀಡುತ್ತಿದ್ದೇವೆ ಎನ್ನುವ ಮೂಲಕ ಕುಮಾರಸ್ವಾಮಿಯವರು ಮನೆ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ಭಾಗದ ಜನರನ್ನು ಸವತಿ ಮಕ್ಕಳಂತೆ ಕಾಣುತ್ತಿರುವ ಅವರು, ಸಂಪೂರ್ಣ ಸಾಲ ಮನ್ನಾ ಮಾಡಿ ಎಂದು ಪ್ರತಿಭಟನೆ ಮಾಡುವ ನಿಮಗೆ ಮತ ಹಾಕುವಾಗ ನನ್ನ ಮುಖ ನೆನಪಿಗೆ ಬರಲಿಲ್ಲವೇ? ಎಂದು ಕೇಳುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ.ಈ ವಿಚಾರದಲ್ಲಿ ಕಾಂಗ್ರೆಸ್‌ನ ಮೌನ ನೋಡಿದರೆ ರಾಜ್ಯ ವಿಭಜನೆಗೆ ಅವರು ಬೆಂಬಲ ನೀಡುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ ಎಂದು ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ