ಬೆಂಗಳೂರು; ಕಳೆದ ಎರಡು ಮೂರು ವಾರದಿಂದ ರಾಜ್ಯ ರಾಜಕೀಯದಲ್ಲಿ ದೊಡ್ಡ ಸುದ್ದಿಯಾದ ವಿಚಾರ ಎಂದರೆ ರೆಸಾರ್ಟ್ ರಾಜಕಾರಣ. ಮೈತ್ರಿ ಪಕ್ಷದ ಅತೃಪ್ತ ಶಾಸಕರು ಸಾಮೂಹಿಕ ರಾಜೀನಾಮೆ ನೀಡಿ ಮುಂಬೈಗೆ ಹೊರಟು ನಿಂತ ಬೆನ್ನಿಗೆ ಮೂರೂ ಪಕ್ಷಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ತಮ್ಮ ಶಾಸಕರನ್ನು ಕಾಯ್ದಿಟ್ಟುಕೊಳ್ಳುವುದು. ಇದೇ ಕಾರಣಕ್ಕೆ ಮೂರೂ ಪಕ್ಷಗಳು ರೆಸಾರ್ಟ್ ರಾಜಕಾರಣದ ಮೊರೆಹೋಗಿದ್ದವು. ಆದರೆ, ಈ ಪೈಕಿ ಬಿಜೆಪಿ ರೆಸಾರ್ಟ್ ವಾಸ್ತವ್ಯದ ಲೆಕ್ಕ ಕೇಳಿದ್ರೆ ಸ್ವತಃ ನೀವೆ ಬೆಚ್ಚಿ ಬೀಳ್ತೀರ.
105 ಜನ ಶಾಸಕರನ್ನು ಹೊಂದಿದ್ದ ಬಿಜೆಪಿ ತನ್ನ ಶಾಸಕರಿಗಾಗಿ ರಮಾಡ ರೆಸಾರ್ಟ್ ಹಾಗೂ ಸಾಯಿಲೀಲಾ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿತ್ತು. ಕಳೆದ 13 ದಿನದಿಂದ ಬಿಜೆಪಿ ಶಾಸಕರೆಲ್ಲರಿಗೂ ಇಲ್ಲೆ ಊಟ ತಿಂಡಿ ವಾಸ್ತವ್ಯ ಎಲ್ಲ. ಆದರೆ, ಇದಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತಾ? ಕೇಳಿದ್ರೆ ಬೆಚ್ಚಿ ಬೀಳುವ ಸರದಿ ನಿಮ್ಮದಾಗುತ್ತೆ.
ತಮ್ಮ ಶಾಸಕರನ್ನು ತಮ್ಮ ಸುಪರ್ದಿಯಲ್ಲೇ ಇಟ್ಟುಕೊಳ್ಳುವ ಕಾರಣ ರೆಸಾರ್ಟ್ ರಾಜಕಾರಣಕ್ಕೆ ಮೊರೆಹೋದ ಬಿಜೆಪಿ ನಾಯಕರು ಅದಕ್ಕಾಗಿ 70 ಲಕ್ಷಕ್ಕೂ ಅಧಿಕ ಹಣ ವ್ಯಯಿಸಿದ್ದಾರೆ ಎನ್ನುತ್ತಿವೆ ಈ ಲೆಕ್ಕಾಚಾರಗಳು.
ಬಿಜೆಪಿ ಶಾಸಕರಿಗಾಗಿ ರಮಾಡ ರೆಸಾರ್ಟ್ನಲ್ಲಿ 54 ರೂಂಗಳನ್ನು ಬುಕ್ ಮಾಡಲಾಗಿತ್ತು. ಈ 54 ರೂಂಗಳ ಒಂದು ದಿನದ ಬಾಡಿಗೆ ಬರೋಬ್ಬರಿ 2.75 ಲಕ್ಷ ರೂ. ಅಂದರೆ 13 ದಿನದ ಒಟ್ಟು ಬಾಡಿಗೆ 35,80,200 ರೂ.
ಇನ್ನೂ ಸಾಯಿಲೀಲಾ ಹೋಟೆಲ್ನಲ್ಲಿ 20 ರೂಂ ಬುಕ್ ಮಾಡಲಾಗಿತ್ತು. ಈ 20 ರೂಂಗಳ ಒಂದು ದಿನದ ಬಾಡಿಗೆ 80,000 ರೂ. 13 ದಿನಕ್ಕೆ ಬಾಡಿಗೆ ರೂಪದಲ್ಲಿ ಖರ್ಚಾದ ಒಟ್ಟು ಹಣ 10,40,000 ರೂ. ಅಂದರೆ ಬಾಡಿಗೆ ರೂಪದಲ್ಲೇ ಬಿಜೆಪಿ ಕಳೆದ 13 ದಿನದಲ್ಲಿ ಒಟ್ಟಾರೆ 46 ಲಕ್ಷ ಹಣ ಖರ್ಚು ಮಾಡಿದೆ.
ಇನ್ನೂ ರಮಾಡ ರೆಸಾರ್ಟ್ನಲ್ಲಿ ಉಳಿದಿದ್ದ ಶಾಸಕರಿಗೆ ಹೊರಗಿನಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಊಟದ ಖರ್ಚನ್ನೂ ಸಹ ಬಿಜೆಪಿ ನಾಯಕರೇ ವಹಿಸಿದ್ದರು. 13 ದಿನಕ್ಕೆ ಒಟ್ಟಾರೆ 25 ಲಕ್ಷ ಹಣ ಕೇವಲ ಊಟಕ್ಕಾಗಿಯೇ ಖರ್ಚು ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೀಗೆ ಊಟ ತಿಂಡಿ ಹಾಗೂ ರೆಸಾರ್ಟ್ ವಾಸ್ತವ್ಯಕ್ಕಾಗಿ ಬಿಜೆಪಿ ಕಳೆದ ಎರಡು ವಾರದ ಅವಧಿಯಲ್ಲಿ 71 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದೆ.
ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಅತೃಪ್ತ ಶಾಸಕರ ಖರ್ಚು ವೆಚ್ಚಗಳ ಲೆಕ್ಕಾಚಾರ ಇದನ್ನೂ ಮೀರುವಂತಿದೆ. ಇಡೀ ರಾಜ್ಯ ಬರ ಹಾಗೂ ನೆರೆಯಿಂದ ತತ್ತರಿಸುತ್ತಿರುವ ಇಂತಹ ಸಂದರ್ಭದಲ್ಲಿ ರೆಸಾರ್ಟ್ ರಾಜಕೀಯದ ಹೆಸರಿನಲ್ಲಿ ರಾಜಕಾರಣಿಗಳು ಇಷ್ಟು ಹಣ ವ್ಯಯಿಸುತ್ತಿರುವುದು ಜನ ಸಾಮಾನ್ಯರ ನಡುವೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿರುವುದು ಸುಳ್ಳಲ್ಲ.