ಬೆಂಗಳೂರು, ಜು.24- ರಾಮನಗರ ಜಿಲ್ಲೆಯಿಂದ ಗೆದ್ದು ಮುಖ್ಯಮಂತ್ರಿ ಜವಾಬ್ದಾರಿ ಹೊತ್ತ ಯಾರೊಬ್ಬರಿಗೂ ಪೂರ್ಣಾವಧಿ ಭಾಗ್ಯ ಸಿಕ್ಕಿಲ್ಲ.
ಇದೀಗ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾಗಿ, ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಕೂಡ ಅಧಿಕಾರ ಪೂರ್ಣಗೊಳಿಸಿಲ್ಲ.
ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ದೋಸ್ತಿ ಸರ್ಕಾರ ಪತನವಾಗಿದೆ. ಅಂದಹಾಗೆ ರಾಮನಗರದಲ್ಲಿ ರಾಜಕೀಯವಾಗಿ ಆಶ್ರಯ ಪಡೆದಿದ್ದ ನಾಲ್ವರು ಪ್ರಭಾವಿ ರಾಜಕಾರಣಿಗಳಿಗೆ ಮುಖ್ಯಮಂತ್ರಿ ಗದ್ದುಗೆ ಅಲಂಕರಿಸುವ ಅದೃಷ್ಟವೇನೊ ಒಲಿಯಿತು.ಆದರೆ, ಸಿಕ್ಕ ರಾಜ್ಯದ ಆಡಳಿತ ಚುಕ್ಕಾಣಿಯನ್ನು ಪೂರ್ಣಾವಧಿವರೆಗೆ ನಡೆಸುವ ಯೋಗ ಮಾತ್ರ ಲಭಿಸಲಿಲ್ಲ.
ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ , ಎಚ್.ಡಿ. ದೇವೇಗೌಡ ಹಾಗೂ ಇದೀಗ ಎಚ್.ಡಿ.ಕುಮಾರಸ್ವಾಮಿ ಯಾರೂ ಅಧಿಕಾರ ಪೂರೈಸಿಲ್ಲ. ಇವರೆಲ್ಲರೂ ಅತಿರಥ-ಮಹಾರಥರಂತೆ ಮೆರೆದವರು.ಸರದಾರರಂತೆ ಆಡಳಿತ ನಡೆಸಿದ ಇವರ್ಯಾರೂ ಅವಧಿ ಪೂರ್ಣಗೊಳಿಸಲು ಸಾಧ್ಯವಾಗಲೇ ಇಲ್ಲ.
ಅಷ್ಟೇ ಅಲ್ಲದೆ, ಎರಡು ಬಾರಿ ಆಯ್ಕೆಯಾದರೂ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳ್ಳುವ ಮುನ್ನವೇ ಪತನಗೊಂಡಿದೆ.
ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯಿಂದ ಆಯ್ಕೆಯಾಗಿ ಸಿಎಂ ಆಗಿದ್ದರು.ಆದರೆ, ನಾಲ್ವರಲ್ಲಿ ಒಬ್ಬರೇ ಒಬ್ಬರೂ ಅಧಿಕಾರ ಪೂರ್ಣಗೊಳಿಸಿಲ್ಲ. ಕುಮಾರಸ್ವಾಮಿ ಅವರು ಮೊದಲ ಬಾರಿ 20 ತಿಂಗಳು ಸಿಎಂ ಆಗಿ ಅಧಿಕಾರ ನಡೆಸಿದ್ದರು.2018ರ ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಜತೆಗೆ ಕೈಜೋಡಿಸಿದ್ದ ಸಿಎಂ 14 ತಿಂಗಳಲ್ಲಿ ಅಧಿಕಾರವನ್ನು ಕಳೆದುಕೊಂಡಿದ್ದಾರೆ.
ಕೆಂಗಲ್ ಹನುಮಂತಯ್ಯ ಅವರು 4 ವರ್ಷ 5 ತಿಂಗಳು ಅಧಿಕಾರ ನಡೆಸಿದ್ದರೆ, ರಾಮಕೃಷ್ಣ ಹೆಗಡೆ 12 ತಿಂಗಳು ಅಧಿಕಾರದಲ್ಲಿದ್ದರು.ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು 17 ತಿಂಗಳ ಬಳಿಕ ಸಿಎಂ ಸ್ಥಾನದಿಂದ ಕೆಳಗೆ ಇಳಿದಿದ್ದರು.
ರಾಮನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರದಿಂದ ರಾಜ್ಯದ ಮುಖ್ಯಮಂತ್ರಿ ಗಾದಿಗೆ ಏರಿದ ನಾಲ್ವರಿಂದಲೂ ಅಧಿಕಾರದ ಅವಧಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂಬುದೇ ಇತಿಹಾಸದಲ್ಲಿ ದಾಖಲಾಗುವಂತಿದೆ.
ರಾಜ್ಯದಲ್ಲಿ ಜನತಾ ಪಕ್ಷದ ಚೊಚ್ಚಲ ಸರ್ಕಾರದ ಚುಕ್ಕಾಣಿ ಹಿಡಿದ ರಾಮಕೃಷ್ಣ ಹೆಗಡೆ ಕನಕಪುರದಿಂದ ಆಯ್ಕೆಯಾಗಿ ಸದನದ ಸದಸ್ಯರಾಗಿದ್ದರು.
ಇಡೀ ಕನ್ನಡನಾಡಿಗೆ ಕಳಸ ಪ್ರಾಯವಾಗಿರುವ ವಿಧಾನಸೌಧದ ನಿರ್ಮಾತೃ- ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಕೂಡ ರಾಮನಗರದವರೇ.1952 ಮತ್ತು 1957ರ ಚುನಾವಣೆಗಳಲ್ಲಿ ರಾಮನಗರ ಕ್ಷೇತ್ರದಿಂದ ಕೆಂಗಲ್ ಆಯ್ಕೆಯಾಗಿದ್ದರು.
1952ರ ಮೊದಲ ವಿಧಾನಸಭೆಯಲ್ಲಿ ಮೈಸೂರು ರಾಜ್ಯದ ಪ್ರಭಾವಿ ನಾಯಕರಾಗಿದ್ದ ಕೆಂಗಲ್ ಅವರಿಗೆ ಮುಖ್ಯಮಂತ್ರಿ ಪದವಿ ಒಲಿದು ನಾಲ್ಕು ವರ್ಷ 5 ತಿಂಗಳು ಆಡಳಿತ ನಡೆಸಿದ್ದರು.ಕಾಂಗ್ರೆಸ್ನಲ್ಲಿ ಪ್ರಭಾವಿ ನಾಯಕರಾಗಿದ್ದ ಸಾಹುಕಾರ್ ಚೆನ್ನಯ್ಯ, ವೀರಣ್ಣಗೌಡ, ಗೌರಿಬಿದನೂರು ನಾಗಣ್ಣಗೌಡ ಸೇರಿದಂತೆ ಅನೇಕರ ವಿಶ್ವಾಸವನ್ನು ಕೆಂಗಲ್ ಹನುಮಂತಯ್ಯ ಕಳೆದುಕೊಂಡಿದ್ದರು.ಆ ಸಮಯದಲ್ಲಿ ಕಾಂಗ್ರೆಸ್ ಪಕ್ಷದವರೇ ಕೆಂಗಲ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು.
ಹಠವಾದಿಯಾಗಿದ್ದ ಕೆಂಗಲ್ ಹನಮಂತಯ್ಯ ಯಾವ ನಾಯಕನ ಮನವೊಲಿಸುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ವಿಶ್ವಾಸಮತ ಸಾಬೀತುಪಡಿಸಲಾಗದೆ ಅಧಿಕಾರ ಕಳೆದುಕೊಂಡರು.ಬಾಕಿ ಉಳಿದಿದ್ದ ನಾಲ್ಕು ತಿಂಗಳ ಅವಧಿಗೆ ಕಡಿದಾಳ್ ಮಂಜಪ್ಪ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರು.
1983ರಲ್ಲಿ ರಾಜ್ಯದಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದಿತು.ಬಿಜೆಪಿ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಸರಕಾರದಲ್ಲಿ ಮುಖ್ಯಮಂತ್ರಿ ಹುದ್ದೆ ರಾಮಕೃಷ್ಣ ಹೆಗಡೆ ಅವರಿಗೆ ಒಲಿದಿತ್ತು.ಆಗ ಹೆಗಡೆ ಉಭಯ ಸದನಗಳಲ್ಲಿ ಯಾವುದರ ಸದಸ್ಯರಾಗಿರಲಿಲ್ಲ.
ಆರು ತಿಂಗಳೊಳಗೆ ವಿಧಾನಸಭೆ ಇಲ್ಲವೇ ವಿಧಾನ ಪರಿಷತ್ ಸದಸ್ಯರಾಗಬೇಕಿತ್ತು.ಕನಕಪುರದಿಂದ ಚುನಾಯಿತರಾಗಿದ್ದ ಪಿ.ಜಿ.ಆರ್.ಸಿಂಧ್ಯಾ ತಮ್ಮ ಸ್ಥಾನವನ್ನು ತೆರವು ಮಾಡಿಕೊಟ್ಟರು.ಕನಕಪುರದಲ್ಲಿ ನಡೆದ ಮರು ಚುನಾವಣೆಯಲ್ಲಿ ಬನ್ನಿಮಕೋಡ್ಲು ಲಿಂಗೇಗೌಡ ಎದುರು ರಾಮಕೃಷ್ಣ ಹೆಗಡೆ ಗೆಲುವು ಸಾಧಿಸಿ, ಸದನ ಸದಸ್ಯರಾದರು.
ಏಳನೆ ವಿಧಾನಸಭೆಯಲ್ಲಿ ಹೆಗಡೆ ಅವರು ಕೇವಲ ಹನ್ನೆರಡು ತಿಂಗಳು ಮಾತ್ರ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು.ಈ ಅವಧಿಯಲ್ಲಿ ಜನತಾ ಪಕ್ಷದ ಶಾಸಕರೊಂದಿಗಿನ ಸಂಭಾಷಣೆಯುಳ್ಳ ವೀರಪ್ಪ ಮೊಯಿಲಿ ಅವರ ಟೇಪ್ ಹಗರಣ ಭಾರೀ ಸದ್ದು ಮಾಡಿತ್ತು.ಇದು ಸರ್ಕಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಹೆಗಡೆ ಅವರು ಸರ್ಕಾರವನ್ನು ವಿಸರ್ಜಿಸಿ, ಜನಾದೇಶಕ್ಕೆ ಮುಂದಾದರು.
1994ರ ಚುನಾವಣೆಯಲ್ಲಿ ರಾಜ್ಯದಲ್ಲಿ ಜನತಾ ದಳ ಪರ ಅಲೆ ಇತ್ತು.ಆಗ ಪಕ್ಷದ ಚುಕ್ಕಾಣಿ ಹಿಡಿದಿದ್ದ ದೇವೇಗೌಡ ಅವರೇ ಮುಂದಿನ ಮುಖ್ಯಮಂತ್ರಿ ಎನ್ನುವ ಕೂಗು ಎದ್ದಿತ್ತು.ಆ ವೇಳೆ ರಾಮನಗರದಿಂದ ಸ್ಪರ್ಧಿಸುವಂತೆ ಸ್ಥಳೀಯ ಮುಖಂಡರು ದುಂಬಾಲು ಬಿದ್ದರು.ಸ್ವಕ್ಷೇತ್ರ ಹೊಳೆನರಸೀಪುರ ಮತ್ತು ರಾಮನಗರ ಪೈಕಿ ಯಾವುದು ಸೂಕ್ತ ಎನ್ನುವ ಆಯ್ಕೆಯನ್ನು ದೇವೇಗೌಡ ಅವರು ಆಪ್ತ ಜ್ಯೋತಿಷಿಗಳಿಗೆ ಒಪ್ಪಿಸಿದರು.
ದೇವೇಗೌಡರು ಮುಖ್ಯಮಂತ್ರಿ ಹುದ್ದೆಗೇರಿ 17 ತಿಂಗಳು ಆಡಳಿತ ನಡೆಸಿ, ಗುರಿ ಈಡೇರಿಸಿಕೊಂಡರು.ಇಷ್ಟು ಮಾತ್ರವಲ್ಲದೆ, ರಾಮನಗರ ಪ್ರತಿನಿಧಿಯಾಗಿದ್ದಾಗಲೇ ಪ್ರಧಾನಮಂತ್ರಿ ಹುದ್ದೆಯೂ ಒಲಿಯಿತು.ಪ್ರಧಾನಿಯಾದ ನಾಲ್ಕು ತಿಂಗಳ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು.
ಆ ನಂತರ 1999ರ ಚುನಾವಣೆಯಲ್ಲಿ ಸೋತಿದ್ದ ದೇವೇಗೌಡರಿಗೆ 2002ರ ಕನಕಪುರ ಸಂಸತ್ ಕ್ಷೇತ್ರ ಉಪಚುನಾವಣೆ ಗೆಲುವು ರಾಜಕೀಯವಾಗಿ ಮರು ಹುಟ್ಟು ನೀಡಿತು.ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ 1996ರಲ್ಲಿ ಲೋಕಸಭಾ ಚುನಾವಣೆ ಎದುರಾಯಿತು.
ಆಗ ಸ್ಥಳೀಯ ಮುಖಂಡರ ಒತ್ತಾಸೆಯ ಮೇರೆಗೆ ಎಚ್.ಡಿ.ಕುಮಾರಸ್ವಾಮಿ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಅವಿಭಜಿತ ಜನತಾದಳ ಅಭ್ಯರ್ಥಿಯಾಗಲು ಮುಂದಾದರು.ಒಲ್ಲದ ಮನಸ್ಸಿನಿಂದಲೇ ದೇವೇಗೌಡರು ಸಮ್ಮತಿಸಿದರು.ಚೊಚ್ಚಲ ಚುನಾವಣೆಯಲ್ಲಿ ಭಾರೀ ಅಂತರದ ಗೆಲುವು ಸಾಧಿಸಿದ ಕುಮಾರಸ್ವಾಮಿ ಸಂಸತ್ ಪ್ರವೇಶಿಸಿದರು.
2004ರಲ್ಲಿ ರಾಮನಗರ ಕ್ಷೇತ್ರದಿಂದ ವಿಧಾನಸಭೆಗೆ ಮೊದಲ ಬಾರಿ ಪ್ರವೇಶಿಸಿದರು.ಅತಂತ್ರ ವಿಧಾನಸಭೆ ಚುನಾವಣೆ ಎದುರಾದಾಗ ಪ್ರಾರಂಭದಲ್ಲಿ ಕಿಂಗ್ ಮೇಕರ್ ಆಗಿದ್ದ ಅವರು, ಬಳಿಕ ಸ್ವತಃ ಪಟ್ಟಾಭಿಷೇಕ ಮಾಡಿಕೊಂಡರು.12ನೆ ವಿಧಾನಸಭೆಯಲ್ಲಿ 20 ತಿಂಗಳು ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರ ಪಾಲಿಗೆ ಈ ನೆಲ ಅದೃಷ್ಟ ತಂದುಕೊಟ್ಟಿತು.ಕುಮಾರಸ್ವಾಮಿ ಕೊಟ್ಟ ಮಾತಿನಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದ ಕಾರಣ ಜೆಡಿಎಸ್-ಬಿಜೆಪಿ ಸರ್ಕಾರ ಪತನಗೊಂಡಿತ್ತು.
2018ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಗೆಲವು ಸಾಧಿಸಿದರು.ಪತ್ನಿ ಅನಿತಾ ಅವರಿಗಾಗಿ ರಾಮನಗರ ಕ್ಷೇತ್ರ ತೊರೆದು, ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡರು. ವಿಧಾನಸಭೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಕಾರಣ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರ ರಚನೆಗೊಂಡಿತು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 14 ತಿಂಗಳೊಳಗೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನ ಆಗಿದೆ.ಈ ಸಲವೂ ರಾಮನಗರ ಜಿಲ್ಲೆಯ ಕ್ಷೇತ್ರವೊಂದರಿಂದ ಗೆದ್ದು ಬಂದವರಿಗೆ ಪೂರ್ಣಾವಧಿ ಆಡಳಿತ ನೀಡಲು ಆಗಿಲ್ಲ.