ಕೇಂದ್ರ ಸಚಿವ ಅಮಿತ್ ಶಾರವರಿಗೆ ಪತ್ರ ಬರೆದ ಯಡಿಯೂರಪ್ಪ

ಬೆಂಗಳೂರು, ಜು.24- ರಾಜ್ಯದಲ್ಲಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸಮತ ಸೋತ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದು ತಮಗೆ ಬೆಂಬಲಿಸಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ.
ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ, ನಿಮ್ಮ ಹಾಗೂ ಪಕ್ಷದ ಪ್ರಮುಖರ ಬೆಂಬಲಕ್ಕೆ ಧನ್ಯವಾದಗಳು.ಕರ್ನಾಟಕದಲ್ಲಿ ನಾವು ಮೈತ್ರಿ ಸರ್ಕಾರವನ್ನು ವಿಶ್ವಾಸಮತದಲ್ಲಿ ಸೋಲಿಸಿದ್ದೇವೆ. ಬಿಜೆಪಿ ಪಕ್ಷ ರಚನೆ ಮಾಡುವ ಹಾದಿಯಲ್ಲಿದ್ದೇವೆ ಎಂದು ಹೇಳಿದ್ದಾರೆ.
ಅಂತೆಯೇ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೂ ಪತ್ರ ಮುಖೇನ ಧನ್ಯವಾದ ತಿಳಿಸಿದ್ದಾರೆ.

ನಮ್ಮ ಪಕ್ಷದ 105 ಶಾಸಕರು ಕಲ್ಲಿನಂತೆ ಪಕ್ಷದ ಜತೆಗೆ ನಿಂತರು.ಕಳೆದ ಮೂರು ದಿನಗಳಲ್ಲಿ ಬಹಳ ಕ್ಲಿಷ್ಟಕರ ರಾಜಕೀಯ ಪರಿಸ್ಥಿತಿಯನ್ನು ನಾವು ಎದುರಿಸಿದ್ದೆವು.ಆದರೆ, ಅದನ್ನೆಲ್ಲ ಮೀರಿ ನಾವು ಮೇಲೆದ್ದು ಬಂದೆವು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಿದ್ದ ವಿಶ್ವಾಸಮತವನ್ನು ನಾವು ಸೋಲಿಸುವ ಮೂಲಕ ರಾಜ್ಯದಲ್ಲಿ ನಮ್ಮ ಪಕ್ಷ ಸರ್ಕಾರ ರಚನೆ ಮಾಡುವ ಅವಕಾಶ ಪಡೆದುಕೊಂಡಿರುವುದನ್ನು ತಿಳಿಸಲು ಹರ್ಷವಾಗುತ್ತಿದೆ ಎಂದು ಬಿಎಸ್‍ವೈ ಪತ್ರದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪಕ್ಷದ ಸದಸ್ಯರು ಹಾಗೂ ರಾಜ್ಯದ ಜನತೆ ಮೈತ್ರಿ ಸರ್ಕಾರದ ದುರಾಡಳಿತದಿಂದ ಮುಕ್ತಿ ಪಡೆದುಕೊಂಡಿರುವುದಾಗಿ ಪತ್ರದಲ್ಲಿ ಹೇಳಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ