ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ ನಡೆಸಿದ ಸ್ಪೀಕರ್

ಬೆಂಗಳೂರು, ಜು.23- ಹದಿನೈದು ಮಂದಿ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ ನಡೆಸಿದ ಸ್ಪೀಕರ್ ಅವರ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.
ಕಾಂಗ್ರೆಸ್‍ನ ಶಾಸಕರಾದ ರಮೇಶ್ ಜಾರಕಿಹೊಳಿ, ಆನಂದ್‍ಸಿಂಗ್, ಮಹೇಶ್ ಕುಮಟಳ್ಳಿ, ಪ್ರತಾಪ್‍ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಮ್‍ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಮುನಿರತ್ನ, ರೋಷನ್ ಬೇಗ್, ಎಂ.ಟಿ.ಬಿ.ನಾಗರಾಜ್, ಡಾ.ಸುಧಾಕರ್, ಶ್ರೀಮಂತ್‍ಪಾಟೀಲ್ ಅವರ ವಿರುದ್ಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ದೂರು ನೀಡಿದ್ದರು.

ಜೆಡಿಎಸ್ ಶಾಸಕರಾದ ಎಚ್.ವಿಶ್ವನಾಥ್, ನಾರಾಯಣಗೌಡ ಹಾಗೂ ಗೋಪಾಲಯ ವಿರುದ್ಧವೂ ಜೆಡಿಎಸ್‍ನಿಂದ ದೂರು ಸಲ್ಲಿಕೆಯಾಗಿತ್ತು. ಒಟ್ಟು 15 ಮಂದಿ ಶಾಸಕರ ಅನರ್ಹತೆ ಪ್ರಕರಣವನ್ನು ಇಂದು ಸ್ಪೀಕರ್ ಅವರು ವಿಚಾರಣೆ ನಡೆಸಿದರು.

ಶಾಸಕರ ಗೈರು ಹಾಜರಿಯಲ್ಲಿ ಅವರ ಪರವಾಗಿ ಆರು ಮಂದಿ ವಕೀಲರು ವಿಚಾರಣೆಗೆ ಹಾಜರಾಗಿದ್ದರು.ಸ್ಪೀಕರ್ ಅವರು ನೀಡಿರುವ ಅಂತಿಮ ನೋಟಿಸ್‍ಗೆ ಉತ್ತರ ನೀಡಲು ಮತ್ತು ವಿಚಾರಣೆಗೆ ಹಾಜರಾಗಲು ನಾಲ್ಕುವಾರಗಳ ಕಾಲವಕಾಶ ನೀಡಬೇಕೆಂದು ಮನವಿ ಸಲ್ಲಿಸಿದರು.
ಇದನ್ನು ವಿರೋಧಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷಗಳ ವಕೀಲರು ಸಂವಿಧಾನದ 110ನೇ ಪರಿಚ್ಛೇದದ ಸೆಕ್ಷನ್ 164(2)ರ ಪ್ರಕಾರ ಶಾಸಕರ ಅನರ್ಹತೆಗೆ ಇದು ಸೂಕ್ತವಾದ ಪ್ರಕರಣ ಎಂದು ಹೇಳಿದರು.

ಈ 15 ಮಂದಿ ಶಾಸಕರು ಶಾಸಕಾಂಗ ಪಕ್ಷಗಳು ನೀಡಿದ ವಿಪ್ ಉಲ್ಲಂಘಿಸಿದ್ದಾರೆ. ವಿಧಾನಸಭೆ ಅಧಿವೇಶನಕ್ಕೆ ಹಾಜರಾಗಿಲ್ಲ. ಪಕ್ಷ ತೊರೆಯುವ ನಿರ್ಧಾರ ಮಾಡಿದ್ದಾರೆ. ಹೀಗಾಗಿ ನಿಯಮ ಉಲ್ಲಂಘನೆ ಮಾಡಿರುವ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಉಚ್ಛಾಟಿಸಬೇಕು ಎಂದು ವಿ.ಎಸ್.ಉಗ್ರಪ್ಪ ಮತ್ತಿತರರು ವಾದಿಸಿದರು.

ವಿಚಾರಣೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವಕೀಲ ಉಗ್ರಪ್ಪ ಅವರು, 15 ಮಂದಿ ಶಾಸಕರನ್ನು ಅನರ್ಹಗೊಳಿಸಲು 8 ಅರ್ಜಿಗಳು ಸಲ್ಲಿಕೆಯಾಗಿವೆ. ಸ್ಪೀಕರ್ ಅವರ ನ್ಯಾಯಾಲಯ ಇಂದು ಅವುಗಳ ವಿಚಾರಣೆ ನಡೆಸಿದೆ. ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅನರ್ಹಗೊಂಡರೆ ಸದರಿ ಶಾಸಕರು ಸಚಿವರಾಗಲು ಅವಕಾಶವಿಲ್ಲ. ಹೀಗಾಗಿ ಅನಗತ್ಯ ಕಾಲಹರಣ ಮಾಡಲು ಶಾಸಕರು ಸಮಯಾವಕಾಶ ಕೇಳುತ್ತಿದ್ದಾರೆ.ಇದಕ್ಕೆ ನಾವು ಪ್ರಬಲ ವಿರೋಧ ವ್ಯಕ್ತಪಡಿಸಿದ್ದು, ಇದು ಸ್ಪಷ್ಟವಾದ ಕಾನೂನು ಉಲ್ಲಂಘನೆಯ ಪ್ರಕರಣ.ಯಾವುದೇ ಸಮಯಾವಕಾಶ ನೀಡದೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂದು ನಮ್ಮ ವಾದ ಮಂಡಿಸಿದ್ದೇವೆ ಎಂದು ಹೇಳಿದರು.

ಸ್ಪೀಕರ್ ಅವರು ಅಂತಿಮ ವಿಚಾರಣೆಗೆ ಹಾಜರಾಗಿ ಎಂದು ಕೊನೆಯ ನೋಟಿಸ್ ಜಾರಿ ಮಾಡಿದ್ದರೂ ಕೂಡ ಮತ್ತಷ್ಟು ಕಾಲಾವಕಾಶ ಕೇಳುವ ಮೂಲಕ ಶಾಸಕರು ಅನಗತ್ಯ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿಚಾರಣೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಖುದ್ದು ಹಾಜರಾಗಿದ್ದರು.
ವಾದ-ವಿವಾದವನ್ನು ಆಲಿಸಿದ ಸ್ಪೀಕರ್ ಅವರು ತಮ್ಮ ತೀರ್ಪನ್ನು ಕಾಯ್ದಿರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ