ತಾವು ಯಾವತ್ತು ಮಾರಾಟದ ವ್ಯಕ್ತಿಯಲ್ಲ-ಶಾಸಕ ರಾಜೇಗೌಡ

Varta Mitra News

ಬೆಂಗಳೂರು, ಜು.23- ರಾಜಕಾರಣ ವ್ಯಾಪಾರವಾಗಿದ್ದು, ತಾವು ಯಾವತ್ತೂ ಮಾರಾಟವಾಗುವ ವ್ಯಕ್ತಿಯಲ್ಲ ಎಂದು ಹುಕ್ಕೆರಿ ಶಾಸಕ ರಾಜೇಗೌಡ ವಿಧಾನಸಭೆಯಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ವಿಶ್ವಾಸಮತಯಾಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, ನಾವೂ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಆಪರೇಷನ್ ಕಮಲಕ್ಕೆ ಒಳಗಾಗುತ್ತಾರೆ ಎಂಬ ವರದಿಗಳು ಬಂದಿದ್ದವು. ತಮ್ಮ ಮಕ್ಕಳು ಕೂಡ ಅನುಮಾನದಿಂದ ನೋಡುವಂತಾಗಿತ್ತು.ಯಾವುದೇ ಕಾರಣಕ್ಕೂ ತಾವು ಮಾರಾಟದ ವ್ಯಕ್ತಿಯಲ್ಲ ಎಂದು ಸ್ಪಷ್ಟಪಡಿಸಿದರು.

ಒಂದು ರಾಜಕೀಯ ಪಕ್ಷದಿಂದ ಸ್ಪರ್ಧಿಸಿ ಚುನಾಯಿತರಾದ ಮೇಲೆ ಆ ಪಕ್ಷವನ್ನು ಬಿಟ್ಟು ಹೋಗುವುದು ಮಾತೃದ್ರೋಹ ಮಾಡಿದಂತೆ ಎಂದು ಬಣ್ಣಿಸಿದರು.
ವಿರೋಧ ಪಕ್ಷದ ನಾಯಕರು ವಾಮ ಮಾರ್ಗದ ಮೂಲಕ ಮುಖ್ಯಮಂತ್ರಿಯಾಗಲು ಬಯಸುತ್ತಿದ್ದಾರೆ. ಇದು ಸರಿಯಲ್ಲ ಎಂದ ಅವರು, ಆಪರೇಷನ್ ಎಂದರೆ ಶಸ್ತ್ರ ಚಿಕಿತ್ಸೆ ಎಂದು ಭಾವಿಸಿಕೊಂಡಿದೆ.ಆದರೆ, ಹಣ, ಆಮಿಷ ವೊಡ್ಡುವುದು ಆಪರೇಷನ್ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಸಾವಿರಾರು ಕೋಟಿ ಬಳಕೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ನರೇಂದ್ರ ಮೋದಿ ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಹೇಳಿದರು. ಇದನ್ನು ನೋಡಿದರೆ ಆ ಉದ್ದೇಶ ಈಡೇರಿದಂತಿಲ್ಲ ಎಂದರು.

ರಾಜಕಾರಣ ಎಂಬುದು ಉಳ್ಳವರ ಪಾಲಾಗಿದೆ. ಮೈತ್ರಿ ಸರ್ಕಾರ 45 ಸಾವಿರ ಕೋಟಿ ರೂ.ರೈತರ ಸಾಲ ಮನ್ನಾ ಮಾಡಿದೆ. ಇಸ್ರೇಲ್ ಕೃಷಿ ಪದ್ಧತಿಗೂ ಉತ್ತೇಜನ ನೀಡಿದೆ.ಕಿಗ್ಗ ದೇವಾಲಯದ ಅಭಿವೃದ್ಧಿಗೂ ಒಂದೂವರೆ ಕೋಟಿ ರೂ.ನೀಡಿದೆ ಎಂದು ರಾಜ್ಯ ಸರ್ಕಾರದ ಸಾಧನೆ ಬಗ್ಗೆ ಬಣ್ಣಿಸಿದರು.
ಜೆಡಿಎಸ್ ಶಾಸಕ ರಾಜ ವೆಂಕಟಪ್ಪನಾಯಕ್ ಮಾತನಾಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿರುವ ಶಾಸಕರು ವಾಪಸ್ ಬರಬೇಕು.ಉತ್ತಮ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರ ಐದು ವರ್ಷ ಯಶಸ್ವಿಯಾಗಿ ಸರ್ಕಾರ ನಡೆಸಬೇಕೆಂದರೆ ಇದಕ್ಕೆ ಅವರೂ ಕೂಡ ಸಹಕಾರ ಮಾಡಿಕೊಡಬೇಕು.ಕಳೆದೊಂದು ವರ್ಷದಿಂದಲೂ ಮೈತ್ರಿ ಸರ್ಕಾರ ಜನಪರ ಆಡಳಿತ ನಡೆಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಕುಮಾರಸ್ವಾಮಿ ಮಂಡಿಸಿದ ನಿರ್ಣಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ