ನಾಲ್ಕು ವಾರಗಳ ಸಮಯ ಕೇಳಿದ ಅತೃಪ್ತರು

ಬೆಂಗಳೂರು,ಜು.23- ಇಂದು ವಿಚಾರಣೆಗೆ ಹಾಜರಾಗುವಂತೆ ಅತೃಪ್ತ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ಸೂಚಿಸಿರುವ ಹಿನ್ನೆಲೆಯಲ್ಲಿ, ತಮಗೆ ನಾಲ್ಕು ವಾರಗಳ ಸಮಯ ಬೇಕೆಂದು ಭಿನಮತೀಯರು ಕೇಳಿಕೊಂಡಿದ್ದಾರೆ.

ಮುಂಬೈನ ರೆಸಾರ್ಟ್ ನಿಂದಲೇ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಪತ್ರ ಮುಖೇನ ಮನವಿ ಮಾಡಿರುವ ಅತೃಪ್ತ ಶಾಸಕರು, ಕಾನೂನಿನ ಪ್ರಕಾರವೇ ರಾಜೀನಾಮೆ ಬಳಿಕ ಆ ಸಂಬಂಧ ಉತ್ತರಿಸಲು 7 ದಿನಗಳ ಕಾಲಾವಕಾಶವಿದೆ. ಪ್ರಸ್ತುತ ನಾವು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ನಮ್ಮ ವಕೀಲರೊಂದಿಗೆ ಚರ್ಚಿಸಬೇಕು. ಹೀಗಾಗಿ ನಮಗೆ ಮತ್ತಷ್ಟು ದಿನಗಳ ಕಾಲ ಕಾಲಾವಕಾಶ ಬೇಕಿದೆ ಎಂದು ತಿಳಿಸಿದ್ದಾರೆ.
ಅನರ್ಹತೆ ವಿಚಾರ ಸಂಬಂಧ ಪಕ್ಷದ ಕಡೆಯಿಂದ ಯಾವುದೇ ನೋಟಿಸ್ ಬಂದಿಲ್ಲ. ಆದರೆ ನೀವು ಇಂದು ಹಾಜರಾಗಿ ನೋಟಿಸ್ ನೀಡಿದ್ದೀರಿ. ಕೆಲ ಅನಿವಾರ್ಯ ಕಾರಣಗಳಿಂದ ನಾವು ಹೊರಗಡೆ ಇದ್ದು ನಿಮ್ಮ ಪ್ರಶ್ನೆಗೆ ಉತ್ತರಿಸಲು ನಮಗೆ 4 ವಾರಗಳ ಗಡವು ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಸೋಮವಾರ ಶಾಸಕಾಂಗ ಪಕ್ಷದ ಅಧ್ಯಕ್ಷರಿಗೆ ವಿಪ್ ನೀಡುವ ಜವಾಬ್ದಾರಿ ಇದೆ ಎಂದು ಸ್ಪೀಕರ್ ರಮೇಶ್ ಕುಮಾರ್ ರೂಲಿಂಗ್ ನೀಡಿದ್ದಾರೆ. ವಿಪ್ ನೀಡಬಹುದೋ ಇಲ್ಲವೋ ಎನ್ನುವುದರ ಬಗ್ಗೆ ಸಿದ್ದರಾಮಯ್ಯ ಕ್ರಿಯಾ ಲೋಪ ಎತ್ತಿದ್ದಾರೆ.ಶಾಸಕಾಂಗ ಪಕ್ಷದ ನಾಯಕರು ಸದಸ್ಯರಿಗೆ ವಿಪ್ ನೀಡಬಹುದು.ಅದು ಸಂವಿಧಾನದತ್ತವಾದ ಹಕ್ಕು.ಈ ವಿಚಾರದ ಬಗ್ಗೆ ನಾನು ಕಾನೂನು ಪಂಡಿತರ ಜೊತೆ ಚರ್ಚೆ ನಡೆಸಿದ್ದೇನೆ. ಇದನ್ನು ನಾನು ಅಧಿಕಾರ ಎಂದು ಕರೆಯುವುದಿಲ್ಲ. ಇದನ್ನು ಜವಾಬ್ದಾರಿ ಎಂದು ಕರೆಯುತ್ತೇನೆ. ಹೀಗಾಗಿ ಶಾಸಕಾಂಗ ನಾಯಕರು ಸದಸ್ಯರಿಗೆ ವಿಪ್ ನೀಡಬಹುದು ಎಂದು ಸ್ಪೀಕರ್ ರೂಲಿಂಗ್ ನೀಡಿದ್ದರು.
ವಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಸ್ಪಷ್ಟನೆ ನೀಡುವಂತೆ ಕೋರಿದ್ದಾರೆ.
ಜುಲೈ 17ರಂದು ಅತೃಪ್ತರ ಬಗ್ಗೆ ನೀಡಿರುವ ಮಧ್ಯಂತರ ಆದೇಶದಿಂದ ಗೊಂದಲ ಸೃಷ್ಟಿಯಾಗಿದೆ.ಕಲಾಪಕ್ಕೆ ಹಾಜರಾಗಬೇಕೇ?ಬೇಡವೇ ಎನ್ನುವುದನ್ನು ಶಾಸಕರ ವಿವೇಚನೆಗೆ ಬಿಡಲಾಗಿದೆ.

ಈ ಆದೇಶ ರಾಜಕೀಯ ಪಕ್ಷಗಳ ವಿಪ್ ಅಧಿಕಾರವನ್ನು ಕಿತ್ತುಕೊಳ್ಳಲಿದೆ. ಶೆಡ್ಯೂಲ್ 102(1)ಬಿ ಅನ್ವಯ ರಾಜಕೀಯ ಪಕ್ಷಗಳಿಗೆ ವಿಪ್ ಅಧಿಕಾರವಿದೆ. ವಿಶ್ವಾಸಮತ ಸಾಬೀತು ವೇಳೆ ಶಾಸಕರಿಗೆ ವಿಪ್ ನೀಡುವುದು ಅನಿವಾರ್ಯವಾಗಿದೆ.ನೀವು ನೀಡಿರುವ ಆದೇಶ ಈ ವ್ಯಾಪ್ತಿಗೆ ಬರುತ್ತದೋ ಇಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಇಂದು ಬೆಳಗ್ಗೆ 11ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರಿಗೆ ಸಮನ್ಸ್ ನೀಡಿದ್ದು, ಈ ಸಮನ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿರುವ ಅತೃಪ್ತ ಶಾಸಕರು, ಯಾವುದೇ ಕಾರಣಕ್ಕೂ ನಾವು ವಿಚಾರಣೆಗೆ ಹಾಜರಾಗುವ ಪ್ರಶ್ನೆಯೇ ಇಲ್ಲ. ಸ್ಪೀಕರ್ ಬೇಕಿದ್ದರೆ ನಮ್ಮನ್ನು ಅನರ್ಹತೆಗೊಳಿಸಲಿ.ನಾವು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ಮಾಡುತ್ತೇವೆ. ಒಂದು ವೇಳೆ ನಾವು ಚುನಾವಣೆಗೆ ನಿಲ್ಲಲಾಗದಿದ್ದರೂ, ತಮ್ಮ ಬೆಂಬಲಿಗರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಳ್ಳುತ್ತೇವೆ ಎಂದು ಸವಾಲೆಸೆದಿದ್ದಾರೆ.
ಇದೇ ವೇಳೆ ನಾವು ಅನಿವಾರ್ಯ ಕಾರಣಗಳಿಂದ ಹೊರಗಡೆ ಇದ್ದು, ನಮಗೆ ನಾಲ್ಕು ವಾರಗಳ ಕಾಲ ಸಮಯ ಬೇಕು ಎಂದು ತಮ್ಮ ವಕೀಲರ ಮೂಲಕ ಅತೃಪ್ತ ಶಾಸಕರು ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ