ಏಕಾಏಕಿ ವೈಲೆಂಟ್ ಆದ ಬಿಜೆಪಿ

ಬೆಂಗಳೂರು, ಜು.23- ಮೂರು ದಿನಗಳ ಕಾಲ ಸೈಲೆಂಟ್ ಆಗಿದ್ದ ಪ್ರತಿಪಕ್ಷ ಬಿಜೆಪಿ ಸದನದಲ್ಲಿಂದು ಏಕಾಏಕಿ ವೈಲೆಂಟ್ ಆಯಿತು.
ವಿಧಾನಸಭೆ ಕಲಾಪದಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಜರಾಗದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ , ಮುಖಂಡರಾದ ಈಶ್ವರಪ್ಪ, ಮಾಧುಸ್ವಾಮಿ, ಗೋವಿಂದ ಕಾರಜೋಳ ಸರ್ಕಾರದ ಮೇಲೆ ಮುಗಿಬಿದ್ದರು.

ಯಡಿಯೂರಪ್ಪ ಮಾತನಾಡಿ, ನಿನ್ನೆ ಸದನದಲ್ಲಿ ನಾವು ಮಾತನಾಡಬೇಕು ಎಂದು ಮೇಲೆ ಬಿದ್ದು ಪ್ರತಿಭಟನೆ ಮಾಡುತ್ತಿದ್ದ ಸದಸ್ಯರೆಲ್ಲರೂ ಎಲ್ಲಿ ಹೋದರು.10 ಗಂಟೆಗೆ ಕಲಾಪ ಆರಂಭವಾಗಿದೆ.ಸ್ಪೀಕರ್ ಅವರು ನಿಗದಿತ ಸಮಯಕ್ಕೆ ಆಗಮಿಸಿದ್ದಾರೆ.ಆಡಳಿತ ಪಕ್ಷದ ಶಾಸಕರು ಸದನದಲ್ಲಿ ಹಾಜರಿಲ್ಲ. ನಾವು 70ಕ್ಕೂ ಹೆಚ್ಚು ಜನ ಸದಸ್ಯರು ಹಾಜರಾಗಿದ್ದೇವೆ. ಪ್ರತಿಪಕ್ಷದಲ್ಲಿ ಕೇವಲ ನಾಲ್ಕು ಜನ ಶಾಸಕರಿದ್ದಾರೆ.ಇದು ಬೇಜವಾಬ್ದಾರಿತನದ ಪರಮಾವಧಿಯಾಗಿದೆ ಎಂದು ಹರಿಹಾಯ್ದರು.

ಈಶ್ವರಪ್ಪ ಅವರು ಮಾತನಾಡಿ, 1969ರಿಂದಲೂ ನಾನು ಸದನದಲ್ಲಿದ್ದೇನೆ. ನಮ್ಮ ನಾಯಕರು ಹೇಳಿದ್ದಾರೆ ಎಂದು ಬಾಯಿ ಮುಚ್ಚಿಕೊಂಡು ಕುಳಿತುಕೊಂಡಿದ್ದೇನೆ ಅಷ್ಟೇ.ಇಲ್ಲಿ ನೋಡಿದರೆ ಸದನಕ್ಕೆ ಹಾಜರಾಗಿ ಚರ್ಚಿಸಬೇಕಾದ ಸದಸ್ಯರೇ ಬಂದಿಲ್ಲ ಎಂದು ರೇಗಿದರು.
ಈ ಸಂದರ್ಭದಲ್ಲಿ ಗರಂ ಆದ ಸ್ಪೀಕರ್ ರಮೇಶ್‍ಕುಮಾರ್ ಅವರು ನಾನು ಈ ವಯಸ್ಸಿನಲ್ಲಿ ನಿನ್ನೆ ರಾತ್ರಿ 12 ಗಂಟೆವರೆಗೂ ಕಲಾಪ ನಡೆಸಿ ಬೆಳಗ್ಗೆ 10 ಗಂಟೆಯ ಕಲಾಪಕ್ಕೆ ಬಂದಿದ್ದೇನೆ. ನಿಮಗೇನಾಗಿದೆ.ನಿಮ್ಮ ಮುಖ್ಯ ಸಚೇತಕರಿಗೆ ಹೇಳಿ ಎಲ್ಲರನ್ನೂ ಬರಲು ಸೂಚಿಸಿ ಎಂದು ತಿಳಿಸಿದರು.
ಎ.ಟಿ.ರಾಮಸ್ವಾಮಿಯನ್ನುದ್ದೇಶಿಸಿ ಮಾತನಾಡಿದ ಜೆ.ಮಾಧುಸ್ವಾಮಿ, ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಹೋಗಬೇಕೆಂದು ಸಲಹೆ ನೀಡುತ್ತಾರೆ ಎಂದು ತಿಳಿದಿದ್ದೆ.ಆದರೆ, ಅವರು ಮೌನ ವಹಿಸಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಸರ್ಕಾರವನ್ನು ಸಮರ್ಥಿಸಿಕೊಂಡು ವಿಳಂಬವಾಗಿದೆ.ಸದಸ್ಯರು ಸದನಕ್ಕೆ ಆಗಮಿಸುತ್ತಾರೆ.ನಿಮ್ಮ ಆತುರ ನಮಗೆ ಅರ್ಥವಾಗುತ್ತದೆ.ನೀವು ಅಂದುಕೊಂಡಂತೆ ಇಂದು ಎಲ್ಲವೂ ನಡೆಯಲಿದೆ ಎಂದು ಸಮಜಾಯಿಷಿ ನೀಡಿದರು.ಆಗ ಸದನಕ್ಕೆ ಕೆಲವು ಸದಸ್ಯರು ಆಗಮಿಸಲಾರಂಭಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ