ಬೆಂಗಳೂರು,ಜು.23- ಪಕ್ಷಾಂತರ ಮಾಡಲು ಪ್ರೇರಿಪಿಸಿದವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗಬೇಕು ಎಂದು ಜೆಡಿಎಸ್ ಶಾಸಕ ಲಿಂಗೇಶ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿದ ವಿಶ್ವಾಸಮತಯಾಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, ಒಂದಲ್ಲ ಒಂದು ದಿನ ಪಕ್ಷಾಂತರ ಮಾಡುವವರಿಗೆ ಕಾಲ ಪಾಠ ಕಲಿಸುತ್ತದೆ. ಇಂದಿನ ರಾಜಕಾರಣದಲ್ಲಿ ನೈತಿಕತೆಯೇ ಇಲ್ಲದಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷಾಂತರಕ್ಕೆ ಉತ್ತೇಜನ ನೀಡುವುದು ಯಾರಿಗೂ ಶೋಭೆ ತರುವಂತದ್ದಲ್ಲ. ಪಕ್ಷಾಂತರದಿಂದ ರಾಜಕೀಯ ಮಾಡಬಾರದು. ವಿರೋಧ ಪಕ್ಷದ ನಾಯಕ ಯಡಿಯೂರಪ್ಪನವರು ಈ ಬಗ್ಗೆ ಗಮನಹರಿಸಬೇಕು ಎಂದರು.
ಆಪರೇಷನ್ ಕಮಲದ ಜೊತೆ ನನ್ನ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಮಾಧ್ಯಮಗಳಲ್ಲಿಯೂ ಈ ಬಗ್ಗೆಯೂ ವರದಿಯಾಗಿತ್ತು.ಆದರೆ ನಾನು ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷ ಬಿಟ್ಟು ಹೋಗುವ ಪ್ರಶ್ನೆ ಇಲ್ಲ. ಆದರೂ ತೇಜೋವಧೆ ಮಾಡುವ ಕೆಲಸ ಮಾಡಲಾಗಿದೆ.ಬಿಜೆಪಿಯಲ್ಲೂ ಹಲವು ಗೆಳೆಯರಿದ್ದಾರೆ.ಬಿಜೆಪಿ ಶಾಸಕ ಮಾಧುಸ್ವಾಮಿ ಅವರು ನಮ್ಮ ಸಂಬಂಧಿ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಳ್ಳೆ ಆಡಳಿತ ನೀಡಿದ್ದಾರೆ, ನೀರಾವರಿಗೆ ಅನುದಾನ ಒದಗಿಸಿದ್ದಾರೆ, ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದರು.